ಕರ್ನಾಟಕದಾದ್ಯಂತ ಭಾರೀ ಮಳೆ: ಮೂವರ ಸಾವು

Prasthutha|

ಬೆಂಗಳೂರು: ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಗದಗ, ವಿಜಯಪುರ, ದಕ್ಷಿಣ ಕನ್ನಡ ಜಿಲ್ಲೆಯ ಹಲವಡೆ ಗುರುವಾರ ಮತ್ತು ರಾತ್ರಿ ಧಾರಾಕಾರ ಮಳೆಯಾಗಿದೆ. ಮೂರು ಮಂದಿ ಸಾವಿಗೀಡಾಗಿದ್ದಾರೆ.

- Advertisement -

ಬಹುತೇಕ ಕಡೆ ಮರಗಳು ಉರುಳಿಬಿದ್ದಿದ್ದು,ಇದರ ಪರಿಣಾಮ ಕೆಲ ಕಡೆ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾದರೆ, ಕೆಲವು ಕಡೆ ವಿದ್ಯುತ್ ಪೂರೈಕೆ ಕಡಿತವಾಗಿತ್ತು.

ಧಾರವಾಡದ ನಗರ ಬಸ್‌ ನಿಲ್ದಾಣದ (ಸಿಬಿಟಿ) ಬಳಿ ಆಲದ ಮರ ದೊಡ್ಡ ಟೊಂಗೆ ಮುರಿದು ಬಿದ್ದು ಸರಕುಸಾಗಣೆ ವಾಹನ ಮತ್ತು ಎರಡು ದ್ವಿಚಕ್ರ ವಾಹನಗಳು ಜಖಂಗೊಂಡವು. ಹುಬ್ಬಳ್ಳಿ ನಗರದಲ್ಲಿ ಸಾಧಾರಣ ಮಳೆಯಾಗಿದೆ.

- Advertisement -

ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಮೂಡಲಗಿ, ಮುನವಳ್ಳಿಯಲ್ಲಿ ಜೋರಾಗಿ ಮಳೆ ಸುರಿಯಿತು. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಕುಮಟಾ, ಅಂಕೋಲಾ, ಶಿರಸಿ, ಸಿದ್ದಾಪುರ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಯಿತು.

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪಟ್ಟಣ ಸೇರಿ ತಾಲ್ಲೂಕಿನ ವಿವಿಧೆಡೆ ಬೀಸಿದ ಬಿರುಗಾಳಿ ಹಾಗೂ ಮಳೆಗೆ ಹಲವು ಮರಗಳು ಧರೆಗೆ ಉರುಳಿದವು. ಸಿಡಿಲು ಬಡಿದು ನಾಲ್ಕು ಜಾನುವಾರು ಮೃತಪಟ್ಟಿವೆ.

ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ನೂರಾರು ಮರಗಳ ಕೊಂಬೆಗಳು ಧರೆಗುರುಳಿದರೆ, ಪಟ್ಟಣದ ತಹಶೀಲ್ದಾರ್‌ ಕಚೇರಿ ಆವರಣದಲ್ಲಿನ ಬೃಹತ್‌ ಮರದ ಕೊಂಬೆ ಮುರಿದು ಬಿದ್ದು ಹಲವು ಬೈಕ್‌ಗಳು ಜಖಂಗೊಂಡಿವೆ.
ಯಲಬುರ್ಗಾ ತಾಲ್ಲೂಕಿನ ಸಮೀಪದ ಕಾತ್ರಾಳ ಕ್ರಾಸ್‌ ಬಳಿ ಡಾಬಾದ ಚಾವಣಿ ಮುರಿದು ಬಿದ್ದ ಪರಿಣಾಮ ಕಾರಿನಲ್ಲಿ ಕೂತಿದ್ದ ವ್ಯಕ್ತಿ ಮೃತಪಟ್ಟು, ಹಲವರಿಗೆ ಗಾಯಗೊಂಡಿದ್ದಾರೆ.

ಕರಾವಳಿಯಲ್ಲಿ ಮಳೆಯ ಜತೆಗೆ ಬಿರುಗಾಳಿಯು 55 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆಯಿದೆ. ಆದ್ದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಚಿಕ್ಕೋಡಿಯಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ಹುಕ್ಕೇರಿ ತಾಲೂಕಿನ ಹೆಬ್ಬಾಳದಲ್ಲಿ ಗುರು ಪುಂಡಲಿಕ ಸಾವಿಗೀಡಾಗಿದ್ದಾರೆ. ಜಮೀನಿನಲ್ಲಿ ಕೆಲಸ ಮುಗಿಸಿ ಮರದ ಕೆಳಗೆ ನಿಂತಾಗ ಸಿಡಿಲು ಬಡಿದಿದೆ. ಇನ್ನೂ ಸಂಕೇಶ್ವರ ಪಟ್ಟದ ಹೊರವಲಯದಲ್ಲಿ ಸಿಡಿಲಿಗೆ 12 ಕುರಿಗಳು ಬಲಿಯಾಗಿವೆ. ರಾಯಭಾಗದ ಹೊರವಲಯದಲ್ಲಿ ಮಹಿಳೆ ಸಿಡಿಲು ಬಡಿದಿದ್ದು, 45 ವರ್ಷದ ಶೋಭಾ ಕೃಷ್ಣ ಕುಲಗೋಡೆ ಸಂಜೆ ಕೃಷಿ ಚಟುವಟಿಕೆ ಮಾಡುವ ವೇಳೆ ಸಿಡಿಲು ಹೊಡೆದಿದೆ.

Join Whatsapp