ಟೋಕಿಯೋ ಒಲಿಂಪಿಕ್ಸ್| ಹಾಕಿ: ಭಾರತೀಯ ವನಿತೆಯರಿಗೆ ವೀರೋಚಿತ ಸೋಲು

Prasthutha|

ಟೋಕಿಯೋ, ಆ.4; ಟೋಕಿಯೋ ಒಲಿಂಪಿಕ್ಸ್ ನ ಮಹಿಳೆಯರ ವಿಭಾಗದ ಹಾಕಿಯಲ್ಲಿ ಸೆಮಿಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದ ಭಾರತೀಯ ವನಿತೆಯರು ಸೆಮಿಫೈನಲ್ ನಲ್ಲಿ ಅಪ್ರತಿಮ ಹೋರಾಟ ಪ್ರದರ್ಶಿಸಿದರೂ ಸೋಲಿಗೆ ಶರಣಾಗಿದ್ದಾರೆ.

- Advertisement -

ಬಲಿಷ್ಠ ಅರ್ಜೆಂಟೀನಾ ವಿರುದ್ಧ ಮಾಡು ಇಲ್ಲವೆ ಮಡಿ ಎಂಬಂತೆ ಜಿದ್ದಾಜಿದ್ದಿನ ಪ್ರದರ್ಶನ ನೀಡಿದ್ದ ವನಿತೆಯರು 1-2 ಗೋಲುಗಳ ಅಂತರದಲ್ಲಿ ಸೋಲು ಕಾಣುವ ಮೂಲಕ ಫೈನಲ್ ಫೈಟ್ ನಿಂದ ಹೊರಬಿದ್ದಿದ್ದಾರೆ

ಪಂದ್ಯ ಆರಂಭವಾಗಿ 2ನೇ ನಿಮಿಷದಲ್ಲಿ ಭಾರತದ ಪರ ಗುರ್ಜಿತ್ ಕೌರ್ ಆಕರ್ಷಕ ಗೋಲು ದಾಖಲಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟಿದ್ದರು. 18ನೇ ನಿಮಿಷದಲ್ಲಿ ದೊರೆತ ಮೂರನೇ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಮಿಸ್ ಮಾಡಿಕೊಳ್ಳದ ಅರ್ಜೆಂಟೀನಾ ನೋಯೆಲ್ ಬಾರಿನೊವೆಯೋ ಮೂಲಕ ಗೋಲು ದಾಖಲಿಸಿ ಸಮಬಲ ಸಾಧಿಸಿತು. ಹೀಗಾಗಿ ಹಾಫ್ ಟೈಮ್ ವೇಳೆ ಉಭಯ ತಂಡಗಳು ತಲಾ ಒಂದು ಗೋಲು ಬಾರಿಸಿ ಸಮಬಲ ಸಾಧಿಸಿದ್ದವು.

- Advertisement -


ಪಂದ್ಯದ 36 ನಿಮಿಷದಲ್ಲಿ ದೊರೆತ ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶವನ್ನು ಮತ್ತೊಮ್ಮೆ ಗೋಲಾಗಿ ಪರಿವರ್ತಿಸಿದ ನೋಯೆಲ್ ಬಾರಿನೊವೆಯೋ ತಂಡಕ್ಕೆ ಹಾಗೂ ವೈಯಕ್ತಿಕವಾಗಿ ಎರಡನೇ ಗೋಲು ಗಳಿಸಿ ಅರ್ಜೆಂಟೀನಾಗೆ ಮುನ್ನಡೆ ತಂದುಕೊಟ್ಟರು. 39 ನೇ ನಿಮಿಷದಲ್ಲಿ ಗ್ರೀನ್ ಕಾರ್ಡ್ ಪಡೆದ ಭಾರತದ ನೇಹ ಪಂದ್ಯದಿಂದ ಎರಡು ನಿಮಿಷಗಳ ಕಾಲ ಹೊರಗುಳಿಯಬೇಕಾಯಿತು

ಪಂದ್ಯ ಪ್ರಾರಂಭವಾಗಿ ಎರಡನೇ ನಿಮಿಷದಲ್ಲಿ ಭಾರತ ಗೋಲು ದಾಖಲಿಸಿ ಮುನ್ನಡೆ ಸಾಧಿಸಿದ್ದರೂ, ಬಳಿಕ ಎರಡು ಗೋಲುಗಳನ್ನು ಬಿಟ್ಟು ಕೊಟ್ಟು ನಿರಾಸೆ ಅನುಭವಿಸಿತು.

ಶುಕ್ರವಾರ ನಡೆಯುವ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ ಕಂಚಿನ ಪದಕಕ್ಕಾಗಿ ಹೋರಾಡಲಿದೆ‌. ಮತ್ತೊಂದೆಡೆ ಇಂದಿನ ಪಂದ್ಯದಲ್ಲಿ ಗೆದ್ದ ಅರ್ಜೆಂಟೀನಾ ಫೈನಲ್ ಪಂದ್ಯದಲ್ಲಿ ನೆದರ್ಲೆಂಡ್ಸ್‌ ತಂಡವನ್ನು ಎದುರಿಸಲಿದೆ



Join Whatsapp