ಸಿಎಂ ನಿರ್ಧಾರಕ್ಕೆ ಬದ್ಧ: ಮುರುಗೇಶ್ ನಿರಾಣಿ

Prasthutha|

ಬೆಂಗಳೂರು, ಜು.29: ಬೆಂಗಳೂರು- ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರವಾಗಿದ್ದು, ಅವರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಮಾಜಿ ಸಚಿವ ಮುರುಗೇಶ್.ಆರ್ ನಿರಾಣಿ ಅವರು ಹೇಳಿದ್ದಾರೆ.

- Advertisement -

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಂಪುಟ ವಿಸ್ತರಣೆಯನ್ನು ಯಾವಾಗ ಮಾಡಬೇಕು, ಯಾರನ್ನು ತೆಗೆದುಕೊಳ್ಳಬೇಕು ಎಂಬುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು, ಅವರ ನಿರ್ಧಾರಕ್ಕೆ ನಾವೆಲ್ಲರೂ ಬದ್ದರಾಗಿರಬೇಕು ಎಂದರು.

ನಿನ್ನೆಯಷ್ಟೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, ಮೊದಲ ಸಚಿವ ಸಂಪುಟ ಸಭೆಯಲ್ಲೇ ಅತ್ಯುತ್ತಮವಾದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ರೈತರು, ಹಿರಿಯರು, ವಿಧವೆಯರು, ಅಂಗವಿಕಲರಿಗೆ ಆದ್ಯತೆ ನೀಡುವ ನಿರ್ಣಯಗಳನ್ನು ಕೈಗೊಂಡಿರುವುದು ಉತ್ತಮ ನಿರ್ಧಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

- Advertisement -

ಬಸವರಾಜ್ ಬೊಮ್ಮಾಯಿ ಅವರ ನಡೆ ಉತ್ತಮವಾಗಿ ಮುಂದುವರೆದಿದೆ. ಇದು ಆಡಳಿತದ ದಿಕ್ಸೂಚಿ ಏನಿರಲಿದೆ ಎಂಬುದನ್ನು ಮೊದಲ ದಿನವೇ ತೋರಿಸಿಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಜನಪರವಾದ ಆಡಳಿತಕ್ಕೆ ಸರ್ಕಾರ ಹೆಚ್ಚು ಒತ್ತು ನೀಡಲಿದೆ ಎಂದು ಹೇಳಿದರು.

ಸಂಪುಟಕ್ಕೆ ಸೇರ್ಪಡೆಯಾಗದಿರಲು ತೀರ್ಮಾನಿಸಿರುವ ಜಗದೀಶ್ ಶೆಟ್ಟರ್ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ನಿರಾಣಿ,
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ನಮ್ಮ ಪಕ್ಷದ ಅತ್ಯಂತ ಹಿರಿಯರು, ಮುಖ್ಯಮಂತ್ರಿ, ಸ್ಪೀಕರ್, ರಾಜ್ಯಾಧ್ಯಕ್ಷ ಆಗಿದ್ದವರು. ಅವರು ಯಾವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದು ತನಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಶೆಟ್ಟರ್ ಜತೆ ಚರ್ಚೆ ಮಾಡುತ್ತೇನೆ. ಉಳಿದ ಹಿರಿಯರ ನಿರ್ಧಾರದ ಬಗ್ಗೆ ಗೊತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.
ಯಾರು ಯಾವ ನಿರ್ಧಾರವನ್ನು ಕೈಗೊಳ್ಳುತ್ತಾರೊ ನನಗೆ ಗೊತ್ತಿಲ್ಲ. ಶೆಟ್ಟರ್ ಅವರದು ವೈಯಕ್ತಿಕ ವಿಚಾರ. ಈ ಬಗ್ಗೆ ನಾನು ಯಾವುದೇ ಗೊಂದಲ ಸೃಷ್ಟಿಸಲು ಇಚ್ಛಿಸುವುದಿಲ್ಲ ಎಂದು ಹೇಳಿದರು.



Join Whatsapp