► ಸಭೆಗಳ ಮೂಲಕ ನಿಯಮ ಉಲ್ಲಂಘಿಸಿದವರಿಗೆ 10 ಲಕ್ಷದ ವರೆಗೂ ದಂಡ
ಆಗಸ್ಟ್ ಒಂದರಿಂದ ಸೌದಿ ಸರ್ಕಾರಿ ಮತು ಖಾಸಗಿ ಕಚೇರಿಗಳಿಗೆ ಪ್ರವೇಶಿಸಬೇಕಾದರೆ ಕೋವಿಡ್ ಲಸಿಕೆ ಕಡ್ಡಾಯವಾಗಿ ಪಡೆದಿರಬೇಕು ಎಂದು ಆಂತರಿಕ ಸಚಿವಾಲಯ ಹೇಳಿದೆ. ಸಚಿವಾಲಯದ ವಕ್ತಾರ ಲೆಫ್ಟಿನೆಂಟ್ ಕರ್ನಲ್ ತಲಾಲ್ ಅಲ್-ಶಾಲ್ಹೌಬ್ ಅವರು ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ವಕ್ತಾರರು, ಈ ನಿರ್ಧಾರವು ಸಾರ್ವಜನಿಕರು ಯಾವುದೇ ವಾಣಿಜ್ಯ, ಸಾಂಸ್ಕೃತಿಕ, ಮನರಂಜನೆ, ಕ್ರೀಡೆ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಹಾಜರಾಗುವುದು ಮತ್ತು ಯಾವುದೇ ವೈಜ್ಞಾನಿಕ, ಸಾಮಾಜಿಕ ಅಥವಾ ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕೂಅನ್ವಯವಾಗುತ್ತದೆ ಎಂದು ಹೇಳಿದ್ದಾರೆ.
ಮಾತ್ರವಲ್ಲದೆ, ಸಾರ್ವಜನಿಕ ಸಾರಿಗೆಯ ಬಳಕೆಯ ಜೊತೆಗೆ ವ್ಯವಹಾರ ಅಥವಾ ಲೆಕ್ಕಪರಿಶೋಧನೆಗಾಗಿ ಯಾವುದೇ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಯನ್ನು ಪ್ರವೇಶಿಸುವುದಕ್ಕೂ ಮುನ್ನ ಲಸಿಕೆಯನ್ನು ಕಡ್ಡಾಯವಾಗಿ ಪಡೆದಿರಬೇಕಾಗುತ್ತದೆ ಎಂದು ಹೊಸ ನಿಯಮಾವಳಿಗಳ ಕುರಿತು ಅವರು ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಒಂದು ವಾರದ ಅವಧಿಯಲ್ಲಿ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿದ 17,800 ಪ್ರಕರಣಗಳು ಪತ್ತೆಯಾಗಿದೆ. ಈ ಕುರಿತು ಎಚ್ಚರಿಸಿದ ಅವರು ಕಠಿಣ ದಂಡದ ಕ್ರಮಗಳ ಕುರಿತು ಒತ್ತಿ ಹೇಳಿದ್ದಾರೆ. ಯಾವುದೇ ರೀತಿಯ ಪಾರ್ಟಿ ಸೇರಿದಂತೆ ಸಾಮಾಜಿಕ ಉದ್ದೇಶಗಳಿಗಾಗಿ ಒಟ್ಟುಗೂಡುವ ಜನರಿಗೆ 40,000 (ಸುಮಾರು 8 ಲಕ್ಷ ರೂ.) ಸೌದಿ ರಿಯಾಲ್ ದಂಡ ವಿಧಿಸುವುದಾಗಿ ಹೇಳಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿ ಸಭೆಗಳನ್ನು ನಡೆಸುವ ಕಾರ್ಮಿಕರಿಗೆ ಕೂಡಾ 50,000 ಸೌದಿ ರಿಯಾಲ್ ದಂಡ ವಿಧಿಸಲಾಗುತ್ತದೆ. ಸಭೆಯ ಆಯೋಜಕರು ಮತ್ತು ಪಾಲ್ಗೊಂಡವರಿಗೂ ಇದು ಅನ್ವಯವಾಗುತ್ತದೆ ಎಂದು ಅವರು ಹೇಳಿದ್ದಾರೆ