ದುಬೈ : ಪ್ರಸಕ್ತ ವರ್ಷದಲ್ಲಿ ವಿವಿಧ ದೇಶಗಳ 2,000ಕ್ಕೂ ಹೆಚ್ಚು ದುಬೈ ನಿವಾಸಿಗಳು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾರೆ ಎಂದು ಮುಹಮ್ಮದ್ ಬಿನ್ ರಶೀದ್ ಸೆಂಟರ್ ಫಾರ್ ಇಸ್ಲಾಮಿಕ್ ಕಲ್ಚರ್ ತಿಳಿಸಿದೆ.
2021ರ ಜನವರಿಯಿಂದ ಜೂನ್ ವರೆಗೆ 2,027 ನಿವಾಸಿಗಳು ಕೇಂದ್ರದಲ್ಲಿ ತಮ್ಮ ಶಹಾದಾ (ಇಸ್ಲಾಮಿಕ್ ಪ್ರಮಾಣವಚನ) ತೆಗೆದುಕೊಂಡಿದ್ದಾರೆ ಎಂದು ಕೇಂದ್ರವು ಬಿಡುಗಡೆ ಮಾಡಿದ ಅಧಿಕೃತ ಅಂಕಿಅಂಶಗಳು ತಿಳಿಸಿವೆ.
ದುಬೈನ ಇಸ್ಲಾಮಿಕ್ ವ್ಯವಹಾರ ಮತ್ತು ದತ್ತಿ ಚಟುವಟಿಕೆಗಳ ಇಲಾಖೆಯ (ಐಎಸಿಎಡಿ) ಅಧೀನದಲ್ಲಿ ಈ ಕೇಂದ್ರವು ಕಾರ್ಯನಿರ್ವಹಿಸುತ್ತಿದೆ. ಈ ಕೇಂದ್ರವು ನವ ಮುಸ್ಲಿಮರಿಗೆ ಇಸ್ಲಾಮಿನ ಸಹಿಷ್ಣುತೆಯನ್ನು ಪರಿಚಯಿಸುತ್ತದೆ. ಅದೇ ರೀತಿ ಅವರಿಗೆ ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಬೆಂಬಲವನ್ನು ನೀಡುತ್ತದೆ.
ನವ ಮುಸ್ಲಿಮರಿಗೆ ಮಾರ್ಗದರ್ಶನ ನೀಡುವ ಮೂಲಕ ಇಸ್ಲಾಮಿನ ಸಂಸ್ಕೃತಿ ಮತ್ತು ಅದರ ಸಹಿಷ್ಣುತೆಗಳನ್ನು ಈ ಕೇಂದ್ರವು ಕಲಿಸುತ್ತದೆ. ಜೊತೆಗೆ ಇಸ್ಲಾಮಿನ ನೈಜ ತತ್ವಗಳನ್ನು ತಿಳಿದುಕೊಳ್ಳಲು ಬಯಸುವ ಇತರ ಧರ್ಮಗಳ ಅನುಯಾಯಿಗಳಿಗೆ ಇಸ್ಲಾಮಿನ ತತ್ವಗಳನ್ನು ಪರಿಚಯಿಸುತ್ತದೆ.
ಎಲ್ಲಾ ತಾಂತ್ರಿಕ ವಿಧಾನಗಳು ಮತ್ತು ಮಾನವ ಸಂಪನ್ಮೂಲಗಳನ್ನು ಬಳಸಿಕೊಂಡು ದುಬೈನಲ್ಲಿ ನೆಲೆಸಿರುವ ವಿವಿಧ ಸಮುದಾಯಗಳು ಹಾಗೂ ಸಾರ್ವಜನಿಕರಿಗೆ ಇಸ್ಲಾಂ ಧರ್ಮದ ಮೌಲ್ಯಗಳು ಮತ್ತು ತತ್ವಗಳನ್ನು ತಿಳಿಸಲು ಕೇಂದ್ರವು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕೇಂದ್ರದ ನಿರ್ದೇಶಕ ಹಿಂದ್ ಮುಹಮ್ಮದ್ ಲೂತಾ ಹೇಳಿದರು. .
ಸಹಿಷ್ಣುತೆಯ ಮೌಲ್ಯಗಳನ್ನು ಉತ್ತೇಜಿಸುವ ಕೇಂದ್ರದ ಉತ್ಕೃಷ್ಟ ಪ್ರವಚನದ ಆಧಾರದ ಮೇಲೆ, 2027 ದುಬೈ ನಿವಾಸಿಗಳು ಇಸ್ಲಾಂ ಸ್ವೀಕರಿಸಿದರು ಎಂದು ನವ ಮುಸ್ಲಿಮರ ಕಲ್ಯಾಣ ವಿಭಾಗದ ಮುಖ್ಯಸ್ಥ ಹನಾ ಅಲ್ ಜಲ್ಲಾಫ್ ಮಾಹಿತಿ ನೀಡಿದ್ದಾರೆ.
ಯಾರಾದರೂ ಇಸ್ಲಾಂ ಧರ್ಮದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅಥವಾ ಶಹಾದಾವನ್ನು ಘೋಷಿಸಲು ಬಯಸಿದರೆ, ಕೇಂದ್ರವು ಐಎಸಿಎಡಿ ಕಾಲ್ ಸೆಂಟರ್ 800600, ಸ್ಮಾರ್ಟ್ ಸರ್ವೀಸಸ್ ಪೋರ್ಟಲ್ www.iacad.gov.ae, ಐಎಸಿಎಡಿ ಅಪ್ಲಿಕೇಶನ್ ಸೇರಿದಂತೆ ವಿವಿಧ ವಿಧಾನಗಳನ್ನು ಒದಗಿಸುತ್ತದೆ ಎಂದು ಅಲ್ ಜಲ್ಲಾಫ್ ಮಾಹಿತಿ ನೀಡಿದ್ದಾರೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.