ತಿರುವನಂತಪುರಂ : ಛಲ ಎಂದರೆ ಹೀಗಿರಬೇಕು, ಎಲ್ಲರೂ ಕೈ ಎತ್ತಿ ಮುಗಿಯುವಂತಿರಬೇಕು. ಈ ಯುವತಿಯ ಸಾಧನೆಗೆ ನಿಜವಾಗಿಯೂ ಎಂತಹವರೂ ಬೆಕ್ಕಸ ಬೆರಗಾಗದಿರಲಾರರು. ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ, 18 ವರ್ಷಕ್ಕೇ ಆರು ತಿಂಗಳ ಮಗುವಿನೊಂದಿಗೆ ಗಂಡನಿಂದ ಪರಿತ್ಯಜಿಸಲ್ಪಟ್ಟು, ಜೀವನೋಪಾಯಕ್ಕಾಗಿ ಲಿಂಬೆ ಶರಬತ್ತು, ಐಸ್ ಕ್ರೀಂ ಮಾರುತ್ತಿದ್ದ ಯುವತಿ ಈಗ ಕೇರಳ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ನೇಮಕಗೊಂಡಿರುವ ಸ್ಫೂರ್ತಿದಾಯಕ ಸುದ್ದಿಯೊಂದು ವರದಿಯಾಗಿದೆ.
ಹೌದು, ಈಗ 31 ವರ್ಷದ ವಯಸ್ಸಿನ ಅನೀ ಶಿವ ಎಲ್ಲರೂ ಅಚ್ಚರಿಗೊಳಿಸುವಂತಹ ಸಾಧನೆ ಸಾಧಿಸಿದ್ದಾರೆ. ಈ ಬಗ್ಗೆ ಕೇರಳ ಪೊಲೀಸ್ ಟ್ವೀಟ್ ಮಾಡಿ, ಆಕೆಯನ್ನು ಅಭಿನಂದಿಸಿದೆ.
“ಇಚ್ಛಾಶಕ್ತಿ ಮತ್ತು ಆತ್ಮವಿಶ್ವಾಸಕ್ಕೆ ಒಂದು ನಿಜವಾದ ಮಾದರಿ. ತನ್ನ 18ನೇ ವಯಸ್ಸಿನಲ್ಲೇ ಪತಿ ಮತ್ತು ಕುಟುಂಬದಿಂದ ೬ ವರ್ಷದ ಪುಟ್ಟ ಮಗುವಿನೊಂದಿಗೆ ಪರಿತ್ಯಜಿಸಲ್ಪಟ್ಟ ಯುವತಿ ಈಗ ವರ್ಕಳ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿದ್ದಾರೆ. ಈಗ 31ನೇ ವಯಸ್ಸಿನ ಅನೀ ಶಿವ ವರ್ಕಳ ಪೊಲೀಸ್ ಠಾಣೆಯಲ್ಲಿ ಪ್ರೊಬೇಷನರಿ ಇನ್ಸ್ ಪೆಕ್ಟರ್ ಆಗಿ ಸೇವೆಗೆ ಸೇರಿದ್ದಾರೆ” ಎಂದು ಕೇರಳ ಪೊಲೀಸ್ ಟ್ವೀಟ್ ಮಾಡಿದೆ.
“ವರ್ಕಳ ಪೊಲೀಸ್ ಠಾಣೆಯಲ್ಲಿ ನನಗೆ ನೇಮಕಾತಿಯಾಗಿದೆ ಎಂದು ಕೆಲವು ದಿನಗಳ ಹಿಂದೆಯಷ್ಟೇ ತಿಳಿಯಿತು. ಇದು ನನ್ನ ಸಣ್ಣ ಮಗುವಿನೊಂದಿಗೆ ಯಾರೊಬ್ಬರ ಸಹಾಯವೂ ಇಲ್ಲದೆ, ತುಂಬಾ ಕಣ್ಣೀರು ಹಾಕಿದ ಜಾಗ” ಎಂದು ಅನೀ ಶಿವ ಹೇಳಿದ್ದಾರೆ.
ವರ್ಕಲ ಶಿವಗಿರಿ ಆಶ್ರಮದ ಸ್ಟಾಲ್ ಗಳಲ್ಲಿ ಲಿಂಬೆ ಶರಬತ್ತು, ಐಸ್ ಕ್ರೀಂ, ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ಹಲವು ವ್ಯಾಪಾರ ವಹಿವಾಟುಗಳನ್ನು ಮಾಡಿದ್ದೆ. ಆದರೆ, ಎಲ್ಲಾ ವಿಫಲವಾಯಿತು. ಆದರೆ, ಬಳಿಕ ವ್ಯಕ್ತಿಯೊಬ್ಬರು ಅಧ್ಯಯನ ಮುಂದುವರಿಸಲು ಮತ್ತು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಪರೀಕ್ಷೆ ಬರೆಯಲು ವ್ಯಕ್ತಿಯೊಬ್ಬರು ಸಲಹೆ ನೀಡಿದರು ಮತ್ತು ಹಣದ ಸಹಾಯವೂ ಮಾಡಿದರು.
ಅನೀ ಶಿವ ಕಂಜಿರಂಕುಲಂನ ಕೆಎನ್ ಎಂ ಸರಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿಯಾಗಿದ್ದಾಗ, ಮನೆಯವರ ವಿರೋಧ ಕಟ್ಟಿಕೊಂಡು ಪ್ರೀತಿಸಿದ ಹುಡುಗನನ್ನು ವಿವಾಹವಾಗಿದ್ದರು. ಮಗು ಹುಟ್ಟಿದ ಬಳಿಕ ಆಕೆಯ ಪತಿ ಆಕೆಯನ್ನು ಬಿಟ್ಟು ಹೋಗಿದ್ದರು.
ಮನೆಗೆ ಹಿಂದಿರುಗಲು ಯತ್ನಿಸಿದರೂ, ಮನೆಯವರು ಆಕೆಯನ್ನು ಸೇರಿಸಿಕೊಳ್ಳಲಿಲ್ಲ. ತನ್ನ ಮಗು ಶಿವಸೂರ್ಯನೊಂದಿಗೆ ಅಜ್ಜಿಯ ಮನೆಯ ಶೆಡ್ ಒಂದರಲ್ಲಿ ಆಕೆ ತನ್ನ ಜೀವನ ಆರಂಭಿಸಿದರು. ಬಳಿಕ ಉದ್ಯೋಗಕ್ಕಾಗಿ ಜಾಗ ಬದಲಿಸಿದ್ದರು.
“ನಾನು ಐಪಿಎಸ್ ಅಧಿಕಾರಿ ಆಗಬೇಕೆಂದು ಬಯಸಿದ್ದೆ. ಆದರೆ, ಅದು ಆಗಲಿಲ್ಲ. ಈಗ, ನನಗೆ ಹೆಮ್ಮೆ ಎನಿಸುತ್ತಿದೆ ಮತ್ತು ನನ್ನ ಬಗ್ಗೆ ಹಾಕಿದ ಸಣ್ಣ ಮಾಹಿತಿಯನ್ನೊಳಗೊಂಡ ಫೇಸ್ ಬುಕ್ ಪೋಸ್ಟ್ ತುಂಬಾ ಜನರು ಶೇರ್ ಮಾಡಿಕೊಂಡಿದ್ದು, ಮನದುಂಬಿ ಬಂದಿದೆ” ಎಂದು ಅನೀ ಶಿವ ಹೇಳಿದ್ದಾರೆ.
ಜನರು ಒಬ್ಬರಿಗೊಬ್ಬರು ಸಹಾಯ ಮಾಡಬೇಕು, ನನ್ನ ಜೀವನದ ಸ್ಫೂರ್ತಿಯಿಂದ ಮಹಿಳೆಯೊಬ್ಬಳು ತನ್ನ ಸ್ವಂತ ಕಾಲಲ್ಲಿ ನಿಂತರೆ ನನಗೆ ಸಂತೋಷವಾಗುತ್ತದೆ. ಎಲ್ಲಾ ಅಡೆತಡೆಗಳನ್ನು ಮೀರಿ ನಾನು ಇಲ್ಲಿಗೆ ಬಂದು ನಿಂತಿದ್ದೇನೆ ಎಂದು ಅನೀ ಶಿವ ತಿಳಿಸಿದ್ದಾರೆ.