ಬೆಂಗಳೂರು : ದೇಶಾದ್ಯಂತ ರಾಜ ಭವನಗಳಿಗೆ ಮುತ್ತಿಗೆ ಹಾಕುವಂತೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ಹಿನ್ನೆಲೆಯಲ್ಲಿ ಬೆಂಗಳೂರಿನ ರಾಜಭವನಕ್ಕೆ ರೈತರು ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ ಮಾರ್ಗಮಧ್ಯೆಯೇ ಪೊಲೀಸರು ರೈತರನ್ನು ವಶಕ್ಕೆ ಪಡೆದರು.
ಇದೇ 26ರಂದು ಮುತ್ತಿಗೆ ಹಾಕಿ ‘ಕೃಷಿಯನ್ನು ಉಳಿಸಿ, ಲೋಕದ ಜನರನ್ನು ಉಳಿಸಿ ದಿನವನ್ನಾಗಿ ಆಚರಿಸಲು ಕಿಸಾನ್ ಮೋರ್ಚಾ ಕರೆ ನೀಡಿತ್ತು. ಕೃಷಿ ಕಾನೂನು ರದ್ದುಪಡಿಸಬೇಕು, ಬೆಳೆ ವಿಮೆ ನೀಡಬೇಕು, ತೈಲ ಬೆಲೆ ಇಳಿಸಬೇಕು ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ರೈತ ಮುಖಂಡ ಕುರುಬೂರು ಶಾಂತಕುಮಾರ್, ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ರಾಜಭವನ ಚಲೋವನ್ನು ಪೊಲೀಸರು ಮೌರ್ಯ ವೃತ್ತದ ಬಳಿ ತಡೆದು ರೈತ ಮುಖಂಡರನ್ನು ವಶಕ್ಕೆ ಪಡೆದರು.
ರಾಜಧಾನಿ ದೆಹಲಿಯ ಗಡಿಭಾಗದಲ್ಲಿ ರೈತರು ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ಕಳೆದ ಹಲವು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಮತ್ತು ರೈತ ಪ್ರತಿನಿಧಿಗಳ ಮಧ್ಯೆ ಹಲವು ಸುತ್ತುಗಳ ಮಾತುಕತೆ ನಡೆದರೂ ಕೂಡ ಪ್ರಯೋಜನವಾಗಿಲ್ಲ. ಹೀಗಾಗಿ ದೇಶಾದ್ಯಂತ ರಾಜಭವನದ ಹೊರಗೆ ಪ್ರತಿಭಟನೆ ನಡೆಸಲಾಗುವುದು ಎಂದು ಹರ್ಯಾಣದ ಅಖಿಲ ಭಾರತ ಕಿಸಾನ್ ಸಭಾದ ಉಪಾಧ್ಯಕ್ಷ ಇಂದರ್ಜಿತ್ ಸಿಂಗ್ ಇತ್ತೀಚೆಗೆ ತಿಳಿಸಿದ್ದರು.
ದೇಶಾದ್ಯಂತ ರಾಜ ಭವನಗಳಿಗೆ ಸಂಯುಕ್ತ ಕಿಸಾನ್ ಮೋರ್ಚಾ ಇದೇ 26 ರಂದು ಮುತ್ತಿಗೆ ಹಾಕಲಿದೆ.
ಮುತ್ತಿಗೆ ಹಾಕಿ ಕೃಷಿಯನ್ನು ಉಳಿಸಿ, ಲೋಕದ ಜನರನ್ನು ಉಳಿಸಿ ದಿವಸವನ್ನು ಆಚರಿಸಲಿದೆ. ಭಾರತದ ಇತಿಹಾಸದಲ್ಲಿ 1975ರ ಜೂನ್ 26 ಕರಾಳ ದಿನ, ಆ ದಿನ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿತು.
ಈಗಿನ ಮೋದಿ ಸರ್ಕಾರದ ಪರಿಸ್ಥಿತಿ ಕೂಡ ಅದಕ್ಕಿಂತ ಭಿನ್ನವಾಗಿಲ್ಲ, ಇದೊಂದು ರೀತಿಯ ಅಘೋಷಿತ ತುರ್ತು ಪರಿಸ್ಥಿತಿ. ನಾಡಿದ್ದು 26ಕ್ಕೆ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ನಾವು ಪ್ರತಿಭಟನೆ ಆರಂಭಿಸಿ 7 ತಿಂಗಳುಗಳು ಕಳೆಯುತ್ತಿವೆ. ಹೀಗಾಗಿ ಆ ದಿನವನ್ನು ಖೇತಿ ಬಚಾವೊ, ಲೋಕತಂತ್ರ ಬಚಾವೊ ದಿವಸವೆಂದು ಆಚರಿಸಲಾಗುವುದು. ದೇಶಾದ್ಯಂತ ರಾಜಭವನದ ಹೊರಗೆ ಪ್ರತಿಭಟನೆ ನಡೆಸಲಾಗುವುದು ಎಂದು ಹರ್ಯಾಣದ ಅಖಿಲ ಭಾರತ ಕಿಸಾನ್ ಸಭಾದ ಉಪಾಧ್ಯಕ್ಷ ಇಂದರ್ಜಿತ್ ಸಿಂಗ್ ತಿಳಿಸಿದ್ದಾರೆ.