ನವದೆಹಲಿ : ಕಳೆದ ವರ್ಷ ಆಗಸ್ಟ್ ನಲ್ಲಿ ಪರಾರಿಯಾಗಿ ಮದುವೆಯಾಗಿದ್ದ ಜೋಡಿಯೊಂದ ಮೇಲೆ ಗುರುವಾರ ರಾತ್ರಿ ಗುಂಡಿಕ್ಕಿದ ಘಟನೆ ನಡೆದಿದೆ. ಪರಾರಿಯಾಗಿ ಮದುವೆಯಾಗಿ, ಪಂಜಾಬ್ ಮತ್ತು ಹರ್ಯಾಣ ಕೋರ್ಟ್ ಮೆಟ್ಟಿಲೇರಿದ್ದ ದಂಪತಿಯ ಮೇಲೆ ದೆಹಲಿಯ ದ್ವಾರಕ ಪ್ರದೇಶದಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.
ದ್ವಾರಕಾದ ಅಂಬ್ರಾಹಿಯ ದಂಪತಿಯ ನಿವಾಸಕ್ಕೆ ನುಗ್ಗಿದ ಆರೇಳು ಮಂದಿ ಹತ್ತು ಸುತ್ತು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ 24ರ ಹರೆಯದ ಟ್ಯಾಕ್ಸಿ ಡ್ರೈವರ್ ವಿನನಯ್ ದಹಿಯಾ ಮೃತಪಟ್ಟಿದ್ದಾರೆ. ಮೃತನ 19 ವರ್ಷದ ಪತ್ನಿ ಕಿರಣ್ ಗಂಭೀರ ಗಾಯಗೊಂಡಿದ್ದಾರೆ.
ಪರಾರಿಯಾಗಿ ವಿವಾಹವಾಗಿದ್ದ ತಮಗೆ ಪ್ರಾಣ ಭಯವಿದೆ ಎಂದು ಜೋಡಿ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಬಗ್ಗೆ ಪರಿಶೀಲಿಸುವಂತೆ ಹೈಕೋರ್ಟ್ ಪೊಲೀಸರಿಗೆ ನಿರ್ದೇಶಿಸಿತ್ತು.
ಕಳೆದ ವರ್ಷ ಆಗಸ್ಟ್ 13ರಂದು ಜೋಡಿ ಮನೆಯವರ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಿತ್ತು. ಇದೀಗ ವರ್ಷ ಕಳೆಯುವುದರೊಳಗೆ ಈ ದಾಳಿ ನಡೆದಿದೆ. ಘಟನೆಯ ಹಿನ್ನೆಲೆಯಲ್ಲಿ ಕಿರಣ್ ಳ ಕುಟುಂಬ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜೋಡಿ ಮೂರು ನಾಲ್ಕು ದಿನಗಳ ಹಿಂದಷ್ಟೇ ಹೊಸ ಮನೆಗೆ ಸ್ಥಳಾಂತರಗೊಂಡಿತ್ತು. ಆಘಂತುಕರು ಮನೆಯೊಳಗೆ ನುಗ್ಗಿ ಗ್ಯಾಸ್ ಸಿಲಿಂಡರ್ ಗೆ ಗುಂಡು ಹೊಡೆದು ಸ್ಫೋಟಿಸಲು ನೋಡಿದ್ದರು. ಅಷ್ಟರಲ್ಲಿ ಕಿರಣ್ ಮತ್ತು ವಿನಯ್ ಪರಾರಿಯಾಗಲು ಯತ್ನಿಸಿದರು. ಕಿರಣ್ ಫ್ಲ್ಯಾಟ್ ನ ಮೆಟ್ಟಿಲು ಹತ್ತಿ ಟೆರೇಸ್ ನಿಂದ ಇನ್ನೊಂದು ಕಟ್ಟಡದ ಟೆರೇಸ್ ಗೆ ಹಾರಿದ್ದಾಳೆ. ವಿನಯ್ ಮೆಟ್ಟಿಲು ಇಳಿದು ರಸ್ತೆಗೆ ತಲುಪಿದ್ದಾನೆ. ಅಲ್ಲಿಗೆ ಗುಂಡಿಕ್ಕಿ ಗುಂಪು ಪರಾರಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.