ಲಂಡನ್: ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳುವ ಮುಸ್ಲಿಮ್ ಆಟಗಾರರ ಮುಂದೆ ಹೈನೇಕೆನ್ ಕಂಪೆನಿಯ ಮದ್ಯದ ಬಾಟಲಿಯನ್ನು ಇಡುವುದಿಲ್ಲ ಎಂದು ಯುರೋಕಪ್ ಅಧಿಕಾರಿಗಳು ಹೇಳಿದ್ದಾರೆ.
ಜರ್ಮನಿ ವಿರುದ್ಧದ ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ ಫ್ರೆಂಚ್ ಫೂಟ್ಬಾಲ್ ಆಟಗಾರ ಪಾಲ್ ಪೊಗ್ಬಾ ಅವರು ಎದುರಿನಲ್ಲಿ ಇಟ್ಟಿದ್ದ ಮದ್ಯದ ಬಾಟಲಿಯನ್ನು ದೂರ ಸರಿಸಿದ್ದರು. ಇದರ ನಂತರ ಯೂರೋ ಕಪ್ ಅಧಿಕಾರಿಗಳು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ‘ದಿ ಟೆಲಿಗ್ರಾಫ್’ ಸೇರಿದಂತೆ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಡಚ್ ಕಂಪನಿಯಾದ ಹೈನೇಕೆನ್ ಯುರೋ ಕಪ್ ನ ಮುಖ್ಯ ಪ್ರಾಯೋಜಕತ್ವವನ್ನು ಹೊಂದಿದೆ.
ಪೋರ್ಚುಗಲ್ ವಿರುದ್ಧದ ಪಂದ್ಯದ ನಂತರ ಫ್ರೆಂಚ್ ಆಟಗಾರ ಕರೀಮ್ ಬೆನ್ಝಿಮಾ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದಾಗ ಅವರ ಮುಂದೆ ಮದ್ಯದ ಬಾಟಲಿ ಇರಲಿಲ್ಲ. ಫ್ರಾನ್ಸ್, ಬೆಲ್ಜಿಯಂ, ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್ ಸೇರಿದಂತೆ ತಂಡಗಳಲ್ಲಿ ಮುಸ್ಲಿಂ ಆಟಗಾರರಿದ್ದಾರೆ.
ಸುದ್ದಿಗೋಷ್ಠಿಯ ಮೊದಲು ಕ್ರಿಸ್ಟಿಯಾನೊ ರೊನಾಲ್ಡೊ ಕೋಕಾ-ಕೋಲಾ ಬಾಟಲಿಗಳನ್ನು ದೂರ ಸರಿಸಿದ ನಂತರ ಪಾಲ್ ಪೊಗ್ಬಾ ಕೂಡಾ ಮದ್ಯದ ಬಾಟಲಿಯನ್ನು ದೂರ ಸರಿಸಿ ಸುದ್ದಿಯಾಗಿದ್ದರು. ಪಾಲ್ ಪೊಗ್ಬಾ ಕೋಕಾ-ಕೋಲಾ ಮತ್ತು ನೀರಿನ ಬಾಟಲಿಯೊಂದಿಗೆ ಇದ್ದ ಮದ್ಯದ ಬಾಟಲಿಯನ್ನು ದೂರ ಸರಿಸಿ ಸುದ್ದಿಗೋಷ್ಠಿಯಲ್ಲಿ ಕುಳಿತಿದ್ದರು.
ಈ ಹಿಂದೆ ಇಸ್ಲಾಮ್ ಧರ್ಮಕ್ಕೆ ಮತಾಂತರವಾಗಿದ್ದ ಪೊಗ್ಬಾ ಮದ್ಯದ ಬ್ರಾಂಡ್ಗಳ ಜಾಹೀರಾತುಗಳಲ್ಲಿ ನಟಿಸದಿರಲು ನಿರ್ಧರಿಸಿದ್ದರು.