ಉಡುಪಿ: ಉಡುಪಿಯ ಕಲ್ಮತ್ ಮಸೀದಿಗೆ ಮಂಜೂರಾಗಿದ್ದ ಜಾಗವನ್ನು ಮರಳಿ ವಶಕ್ಕೆ ಪಡೆದಿರುವ ಬಿಜೆಪಿ ಸರಕಾರದ ಕ್ರಮವು ಅನ್ಯಾಯದಿಂದ ಕೂಡಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಉಡುಪಿ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್ ಹೇಳಿದ್ದಾರೆ.
ಕೊಡವೂರು ಗ್ರಾಮದ ಐತಿಹಾಸಿಕ ಕಲ್ಮತ್ ಮಸೀದಿಯು 1908ರಿಂದಲೇ ಸರಕಾರದಿಂದ ತಸ್ದೀಕ್ ಪಡೆಯುತ್ತಿದ್ದು, ಇದು ಈಗಲೂ ಮುಂದುವರಿದಿದೆ. 1993ರಲ್ಲಿ ಈ ಜಾಗವು ವಕ್ಫ್ ಬೋರ್ಡ್ ನಲ್ಲಿ ನೋಂದಣಿಗೊಂಡಿದ್ದು, ಬಿಜೆಪಿ ಸರಕಾರದ ಆಡಳಿತಾವಧಿಯಲ್ಲೇ ಕಾನೂನಾತ್ಮಕ ಪುರಾವೆಗಳ ಆಧಾರದಲ್ಲಿ ಗೆಝೆಟ್ ನೋಟಿಫಿಕೇಷನ್ ಕೂಡ ಆಗಿದೆ. ಆದಾಗ್ಯೂ, ಸೂಕ್ತ ದಾಖಲೆಗಳಿದ್ದರೂ ಇದೀಗ ಮಸ್ಜಿದ್ ಜಾಗವನ್ನು ಮರಳಿ ಪಡೆದಿರುವ ಸರಕಾರದ ಕ್ರಮವು, ಧಾರ್ಮಿಕ ಅಲ್ಪಸಂಖ್ಯಾತರ ಇತರ ಆರಾಧನಾಲಯಗಳ ಮೇಲೆ ಹಕ್ಕು ಸ್ಥಾಪಿಸಲು ಮತ್ತು ಇಲ್ಲಿನ ಸಾಹಾರ್ದ ಕೆಡಿಸಲು ಸ್ಥಾಪಿತ ಹಿತಾಸಕ್ತಿಗಳಿಗೆ ಉತ್ತೇಜನ ನೀಡಲಿದೆ.
ಮಸ್ಜಿದ್ ಜಾಗವನ್ನು ಅತಿಕ್ರಮಣ ನಡೆಸಿದ ಬಳಿಕ ಸಂಘಪರಿವಾರದ ಶಕ್ತಿಗಳು ಕಾನೂನು ವ್ಯವಸ್ಥೆಯನ್ನು ಧಿಕ್ಕರಿಸಿ ಇಲ್ಲಿ ನಿರಂತರವಾಗಿ ಶಾಂತಿ ಕದಡಲು ಯತ್ನಿಸುತ್ತಾ ಬಂದಿದ್ದಾರೆ. ಅತಿಕ್ರಮಣವನ್ನು ತೆರವುಗೊಳಿಸುವ ಬಗ್ಗೆ ಆದೇಶವಿದ್ದ ಹೊರತಾಗಿಯೂ, ಇಲ್ಲಿನ ಆಡಳಿತ ವ್ಯವಸ್ಥೆಯು ಸಂಘಪರಿವಾರದ ಮರ್ಜಿಗೆ ಮಣಿಯುತ್ತಾ ಬಂತು. ನಂತರದಲ್ಲಿ ಗಝೆಟೆಡ್ ನೋಟಿಫಿಕೇಷನ್ ರದ್ದುಪಡಿಸಲು ಹಲವು ಅವಾಸ್ತವಿಕ ವಿವರಣೆಗಳನ್ನೂ ಜಿಲ್ಲಾಡಳಿತವು ಸರಕಾರಕ್ಕೆ ಕಳುಹಿಸಿಕೊಟ್ಟಿತು. ಇದೀಗ ಬಿಜೆಪಿ ಸರಕಾರವು ತನ್ನ ರಾಜಕೀಯ ಲಾಭಕ್ಕಾಗಿ ಕಾನೂನುಬಾಹಿರವಾಗಿ ಮಸ್ಜಿದ್ ಜಾಗವನ್ನು ಮರಳಿ ಪಡೆದಿದ್ದು, ಇಂತಹ ದುರುದ್ದೇಶಪೂರಿತ ಕ್ರಮಗಳು ಮುಸ್ಲಿಮ್ ಸಮುದಾಯ ಮತ್ತು ಅವರ ಆರಾಧನಾಲಯಗಳನ್ನು ಮತ್ತಷ್ಟು ಅಭದ್ರತೆ ತಳ್ಳಲಿದೆ. ಶಾಂತಿ, ಸಹಬಾಳ್ವೆಗೆ ಧಕ್ಕೆ ಉಂಟು ಮಾಡುವ ಇಂತಹ ಅನ್ಯಾಯದ ಕ್ರಮಗಳನ್ನು ಪಾಪ್ಯುಲರ್ ಫ್ರಂಟ್ ಖಂಡಿಸುತ್ತದೆ ಮತ್ತು ಮಸ್ಜಿದ್ ಜಾಗಕ್ಕೆ ಸಂಬಂಧಿಸಿ ನಡೆಯುವ ಎಲ್ಲಾ ರೀತಿಯ ಕಾನೂನು ಹೋರಾಟವನ್ನು ಅದು ಬೆಂಬಲಿಸುತ್ತದೆ ಎಂದು ನಝೀರ್ ಅಹ್ಮದ್ ತಿಳಿಸಿದ್ದಾರೆ.