ಎಸ್.ಪಿ.ಬಿ ಎಂದೇ ಖ್ಯಾತರಾಗಿದ್ದ ಬಾಲಸುಬ್ರಹ್ಮಣ್ಯಂರವರ ಪೂರ್ಣ ಹೆಸರು ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ.
1946ರ ಜೂನ್ 4ರಂದು ಬ್ರಿಟೀಶ್ ಇಂಡಿಯಾದ ಮದ್ರಾಸ್ ಪ್ರೆಸಿಡೆನ್ಸಿಯ ನೆಲ್ಲೂರ್ ನಲ್ಲಿ ಜನಿಸಿದ್ದ ಎಸ್.ಪಿ.ಬಿ ತಮಿಳು, ತೆಲುಗು, ಕನ್ನಡ, ಮಲಯಾಳ ಮತ್ತು ಹಿಂದಿ ಒಳಗೊಂಡಂತೆ ಹಲವು ಭಾಷೆಗಳಲ್ಲಿ ಒಟ್ಟು 40000ಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿರುವ ಎಸ್.ಪಿ.ಬಾಲಸುಬ್ರಹ್ಮಣ್ಯಂರವರು ಹಿನ್ನೆಲೆ ಗಾಯನ, ಸಂಗೀತ ನಿರ್ದೇಶಕ, ಡಬ್ಬಿಂಗ್ ಆರ್ಟಿಸ್ಟ್ ಆಗಿ ಸೇವೆ ಸಲ್ಲಿಸಿದ್ದರು. ಅತ್ಯಧಿಕ ಹಾಡುಗಳನ್ನು ಹಾಡಿರುವುದಕ್ಕಾಗಿ ಅವರು ಗಿನ್ನೆಸ್ ಪುಸ್ತಕದಲ್ಲಿ ಸ್ಥಾನ ಪಡೆದಿದ್ದರು.
ಅತ್ಯುತ್ತಮ ಪುರುಷ ಹಿನ್ನೆಲೆ ಗಾಯನಕ್ಕಾಗಿ ಅವರು ಒಟ್ಟು ಆರು ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದರು, ಮಾತ್ರವಲ್ಲದೆ ಹಲವು ಗೌರವ ಡಾಕ್ಟರೇಟ್ ಗಳನ್ನು ಸ್ವೀಕರಿಸಿದ್ದರು. ‘ನಕ್ಕರೇ ಅದೇ ಸ್ವರ್ಗ’ ಚಿತ್ರದ ಮೂಲಕ ಎಸ್.ಪಿ.ಬಿ ತನ್ನ ಕನ್ನಡದ ಗಾನ ಪರ್ವವನ್ನು ಆರಂಭಿಸಿದ್ದರು. 1966 ರ ಡಿಸೆಂಬರ್ 15 ರಂದು ತೆಲುಗಿನ ‘ಶ್ರೀ ಶ್ರೀ ಮರ್ಯಾದ ರಾಮಣ್ಣ’ ಸಿನಿಮಾಕ್ಕೆ ಮೊದಲ ಹಾಡುಹಾಡಿದ್ದು ಎರಡನೆ ಹಾಡನ್ನು ಕನ್ನಡ ಚಿತ್ರಕ್ಕಾಗಿ ಹಾಡಿದ್ದರು. ಒಟ್ಟು 4 ಸಾವಿರಕ್ಕೂ ಹೆಚ್ಚು ಕನ್ನಡ ಗೀತೆಗಳಿಗೆ ಅವರು ಧ್ವನಿಯಾಗಿದ್ದಾರೆ.