ಕೊಲ್ಕತಾ : ಫೆಲೆಸ್ತೀನ್-ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಸ್ಥಿತಿ ಬಂಗಾಳದಲ್ಲಿದೆ ಎಂಬಂತೆ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್ಕಾರ್ ಬಿಂಬಿಸುತ್ತಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಆಪಾದಿಸಿದೆ.
ರಾಜ್ಯ ಸರಕಾರವನ್ನು ಹಿಂದೆಂದೂ ಕಂಡರಿಯದ ರೀತಿ ದಿನನಿತ್ಯ ಗುರಿಯಾಗಿಸಲಾಗುತ್ತಿದೆ. ರಾಜ್ಯಪಾಲರು ಬಿಜೆಪಿ ವಕ್ತಾರರಂತೆ, ಸರಕಾರದ ವಿರುದ್ಧ ಆಧಾರ ರಹಿತ ಮತ್ತು ವಿಷಕಾರಿ ಆರೋಪಗಳನ್ನು ಮಾಡುತ್ತಿದ್ದಾರೆ. ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವೆ ನಡೆಯುತ್ತಿರುವ ಯುದ್ಧದ
ರೀತಿಯಲ್ಲಿ ಬಂಗಾಳದಲ್ಲಿ ಯುದ್ಧ ನಡೆಯುತ್ತಿದೆ ಎಂಬಂತಹ ಸಂದೇಶ ರವಾನಿಸಲು ಅವರು ಯತ್ನಿಸುತ್ತಿದ್ದಾರೆ ಎಂದು ಟಿಎಂಸಿ ವಕ್ತಾರ, ಸಂಸದ ಸುಖೇಂದು ಶೇಖರ್ ರಾಯ್ ಹೇಳಿದ್ದಾರೆ.
ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿದೆ ಎಂಬಂತೆ ನಂಬಿಸಲು ಮಾಡುತ್ತಿರುವ ನಿರ್ದಿಷ್ಟ ಯೋಜನೆ ಇದು ಎಂದು ಅವರು ಆಪಾದಿಸಿದ್ದಾರೆ. ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ, ಕೇಂದ್ರದ ಬಿಜೆಪಿ ಸರಕಾರ ಟಿಎಂಸಿ ವಿರುದ್ಧ ಸಂಚು ರೂಪಿಸಿದೆ ಎಂದು ಅವರು ಹೇಳಿದ್ದಾರೆ.