ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳ ವಿರುದ್ದ ಕಳೆದ ಆರು ತಿಂಗಳುಗಳಿಂದ ಕೇಂದ್ರ ಸರ್ಕಾರದ ವಿರುದ್ದ ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಹರಿಯಾಣದ ಜಿಂದ್‌ಗೆ ಸ್ಥಳಾಂತರಿಸಲು ಸರ್ಕಾರ ಹುನ್ನಾರ ನಡೆಸಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಆರೋಪಿಸಿದ್ದಾರೆ. ಶಾಂತಿಯುತವಾಗಿ ನಡೆಯುತ್ತಿರುವ ರೈತ ಹೋರಾಟಕ್ಕೆ ಧಕ್ಕೆ ತರಲು ಸರ್ಕಾರ ಯತ್ನಿಸಿದರೆ ಭಾರೀ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಕಳೆದ ಆರು ತಿಂಗಳಿಂದ ರೈತರು ದೆಹಲಿಯ ಗಡಿ ಸ್ಥಳಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಯಾವುದೇ ಕಾರಣಕ್ಕೂ ಇಲ್ಲಿಂದ ಕದಲುವುದಿಲ್ಲ ಎಂದು ಅವರು ಹೇಳಿದ್ದಾರೆ.ರೈತರ ಸಭೆಯನ್ನುದ್ದೇಶಿಸಿ ಮಾತನಾಡಿದ ಟಿಕಾಯತ್, “ರೈತರ ಹೋರಾಟವು ದೆಹಲಿ ಗಡಿಗಳಿಂದ ಹರಿಯಾಣದ ಜಿಂದ್‌ಗೆ ಬದಲಾಗಬೇಕೆಂದು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಯಸಿದೆ. ಆದರೆ ಅವರ ಕುತಂತ್ರವು ಯಶಸ್ವಿಯಾಗಲು ನಾವು ಅವಕಾಶ ಕೊಡುವುದಿಲ್ಲ” ಎಂದಿದ್ದಾರೆ.
“ಹೋರಾಟದ ಕೇಂದ್ರ ಬಿಂದುವನ್ನು ದೆಹಲಿ ಗಡಿಯಿಂದ ಹರಿಯಾಣಕ್ಕೆ ಸ್ಥಳಾಂತರಿಸಬೇಕೆಂದು ಅವರು ಬಯಸುತ್ತಾರೆ. ಆದರೆ ನಾವು ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡುವುದಿಲ್ಲ” ಎಂದಿದ್ದಾರೆ. ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹರಿಯಾಣದ ಟೋಲ್ ಪ್ಲಾಜಾಗಳು ಸೇರಿದಂತೆ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಮೊದಲಿನಂತೆ ಮುಂದುವರೆಯುತ್ತದೆ. ರೈತರ ಬೇಡಿಕೆಗಳನ್ನು ಸರ್ಕಾರ ಈಡೇರಿಸುವವರೆಗೂ ಆಂದೋಲನ ಮುಂದುವರೆಯಲಿದೆ” ಎಂದು ಟಿಕಾಯತ್ ತಿಳಿಸಿದ್ದಾರೆ.
ರೈತ ಆಂದೋಲನ ನಡೆಯುತ್ತಿರುವ ಇಂದಿನ ಸಮಯದಲ್ಲಿ ರೈತರ ವಿರುದ್ಧ ಹಲವಾರು ಪೊಲೀಸ್ ಪ್ರಕರಣಗಳು ದಾಖಲಾಗಿವೆ ಎಂದಿರುವ ಟಿಕಾಯತ್, “ಈ ರೀತಿಯಲ್ಲಿ ಯಾವುದೇ ಆಂದೋಲನ ನಡೆಯುತ್ತಿರುವ ಸಮಯದಲ್ಲಿ ಒ ಜೈಲಿಗೆ ಹೋಗಲು ಹೆದರದೇ ಸಿದ್ಧರಾಗಿರಬೇಕು” ಎಂದು ತಿಳಿಸಿದರು.