‘ಚಾಣಕ್ಯ’ನನ್ನು ಸೋಲಿಸಿದ ಚಾಣಾಕ್ಷ ಮತದಾರ

0
495

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ, ಮಿಝೋರಾಮ್ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಯಾರು ಗೆದ್ದರು ಎಂದು ಕೇಳುವವರಿಗಿಂತಲೂ ಹೆಚ್ಚಾಗಿ ಬಿಜೆಪಿ ಸೋತಿದೆಯಲ್ಲಾ ಎಂದು ನಿಟ್ಟುಸಿರುಬಿಟ್ಟ ಭಾರತೀಯರ ಸಂಖ್ಯೆ ಹೆಚ್ಚಿದೆ. ಇಂತಹ ನಿಟ್ಟುಸಿರಿಗೆ ಕಾರಣಗಳು ಹಲವು ಇವೆ. ಆದ್ದರಿಂದಲೇ ಈ ಐದು ರಾಜ್ಯಗಳ ಚುನಾವಣೆಯಲ್ಲಿ ಗೆದ್ದವರ ಸಂಭ್ರಮಕ್ಕಿಂತಲೂ ಬಿಜೆಪಿ ಪರಾಭವಗೊಂಡಿರುವ ಬಗ್ಗೆ ಸಂಭ್ರಮಿಸುವರೇ ಅಧಿಕ ಮಂದಿ. ಅವರೆಲ್ಲ ಬೀದಿಗಿಳಿದು ಪಟಾಕಿ ಸಿಡಿಸಿ ಸಂಭ್ರಮಿಸುವವರಲ್ಲ. ಒಮ್ಮೆ ಅಧಿಕಾರದಿಂದ ತೊಲಗಿತಲ್ಲ ಎಂದು ತಮಗೆ ತಾವೇ ಅಂದುಕೊಳ್ಳುತ್ತಾ ತಮ್ಮ ಎಂದಿನ ಕಾಯಕದಲ್ಲಿ ತಲ್ಲೀನರಾಗುವ ಜನಸಾಮಾನ್ಯ ವರ್ಗಕ್ಕೆ ಈ ಫಲಿತಾಂಶವು ಅಮಿತಾನಂದ ನೀಡಿರುವುದು ವಾಸ್ತವ ಸಂಗತಿ.

2019ರ ಲೋಕಸಭಾ ಚುನಾವಣೆಯ ಮುನ್ನ ಪ್ರಕಟಗೊಂಡಿರುವ ಪಂಚರಾಜ್ಯಗಳ ಫಲಿತಾಂಶವು ರಾಷ್ಟ್ರರಾಜಕಾರಣದಲ್ಲಿ ಅತ್ಯಂತ ಮಹತ್ವದ್ದೆನಿಸಿದೆ. ಗೆಲುವು ಸಾಧಿಸಿರುವ ಬಿಜೆಪಿಯೇತರ ಪಕ್ಷಗಳಿಗೆ ಹಲವು ಪಾಠಗಳಿವೆ. ಖಂಡಿತವಾಗಿಯೂ ಇದು ಸಂಭ್ರಮಿಸುವ ಗೆಲುವಂತೂ ಅಲ್ಲವೇ ಅಲ್ಲ. ಇದೇ ವೇಳೆ ಈ ಸೋಲನ್ನು ಅಷ್ಟು ಸುಲಭವಾಗಿ ಒಪ್ಪಿಕೊಂಡು ಸೋಮಾರಿಯಾಗುವ ಪಕ್ಷವೂ ಬಿಜೆಪಿ ಅಲ್ಲ. ವಿಧಾನಸಭೆಯ ಗೆಲುವಿನ ಯಾತ್ರೆಯನ್ನು ಲೋಕಸಭೆಯವರೆಗೆ ಕೊಂಡೊಯ್ಯುವ ಹೊಣೆಗಾರಿಕೆ ಕಾಂಗ್ರೆಸ್, ಬಿಎಸ್ಪಿಮತ್ತಿತರ ಬಿಜೆಪಿಯೇತರ ಪಕ್ಷಗಳ ಮೇಲಿದೆ. ಇದೇ ವೇಳೆ ವಾಮಮಾರ್ಗವಾದರೂ ಸರಿ, ಮಹಾಚುನಾವಣೆಯಲ್ಲಿ ಗೆಲುವು ಸಾಧಿಸಲೇ ಬೇಕು ಎಂಬ ಹಿಂದುತ್ವ ಅಜೆಂಡಾವೂ ಬಿಜೆಪಿಯದ್ದು. ಇಂತಹ ಸನ್ನಿವೇಶದಲ್ಲಿ ಚಾಣಾಕ್ಷ ಮತದಾರನು ಮತ್ತೊಮ್ಮೆ ಮೋಸಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ಜಾತ್ಯತೀತ ಎನಿಸಿಕೊಂಡ ಪಕ್ಷಗಳದ್ದು.

ಮುಖ್ಯವಾಗಿ ದೇಶದ ಕುತೂಹಲ ಕೆರಳಿಸಿದ ಮಧ್ಯಪ್ರದೇಶ ಚುನಾವಣಾ ಫಲಿತಾಂಶದ ಅಂಕಿಅಂಶಗಳನ್ನು ಪರಿಗಣಿಸಬೇಕಾಗಿದೆ. ಮೋದಿ ಸರಕಾರ ಮಧ್ಯರಾತ್ರಿ ವೇಳೆ ತೆಗೆದುಕೊಳ್ಳುವ ತೀರ್ಮಾನ ಮತ್ತು ಕ್ರಮಗಳಂತೆಯೇ ಮಧ್ಯಪ್ರದೇಶದ ಫಲಿತಾಂಶ ಅನಿರೀಕ್ಷಿತ ಹಾಗೂ ಬೆಚ್ಚಿಬೀಳಿಸುವಂಥದ್ದು. 2013ರಲ್ಲಿ ಮಧ್ಯಪ್ರದೇಶದಲ್ಲಿ ಶೇ. 44.88 ಮತಗಳನ್ನು ಬಾಚಿಕೊಂಡು ಬಿಜೆಪಿ ಒಟ್ಟು 165 ಸೀಟುಗಳನ್ನು ಪಡೆದಿತ್ತು. ಆಗ ಕಾಂಗ್ರೆಸ್ ಪಡೆದದ್ದು ಶೇ. 36.88 ಮತಗಳನ್ನು. ಕಾಂಗ್ರೆಸ್ ಸೀಟುಗಳ ಸಂಖ್ಯೆ ಬರೇ 58. ಭಾರೀ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೇರಿತ್ತು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ 113 ಮತ್ತು ಬಿಜೆಪಿ 106 ಸೀಟುಗಳನ್ನು ಪಡೆದಿವೆ. ಉಳಿದಂತೆ ಬಿಎಸ್ಪಿಕೂಡಾ ಗಮನಾರ್ಹ ಶೇಕಡಾವಾರು ಮತಗಳನ್ನು ಗಳಿಸಿ 2 ಸೀಟುಗಳನ್ನು ಪಡೆದಿದೆ. ಚುನಾವಣೆಗೆ ಮುನ್ನ ಬಿಜೆಪಿಯ ಪ್ರಾಬಲ್ಯವನ್ನು ಚೆನ್ನಾಗಿ ಅರಿತಿದ್ದ ಕಾಂಗ್ರೆಸ್ ಪಕ್ಷವು ಜಾತ್ಯತೀತ ಪರಂಪರೆಯನ್ನು ಉಳಿಸುವ ಹೊಣೆಗಾರಿಕೆಯ ಭಾಗವಾಗಿ ಬಿಎಸ್ಪಿಯೊಂದಿಗೆ ಒಂದು ವೇಳೆ ಇಲ್ಲಿ ಮೈತ್ರಿ ಮಾಡಿಕೊಂಡಿದ್ದರೆ ಅದರ ಒಟ್ಟು ಸೀಟುಗಳ ಸಂಖ್ಯೆ 140ನ್ನು ದಾಟುತ್ತಿತ್ತು. ಅಂದರೆ ಒಟ್ಟು ಮತದಾನದ ಶೇ. 45ರಷ್ಟನ್ನು ಕಾಂಗ್ರೆಸ್ ಮತ್ತು ಬಿಎಸ್ಪಿಹಂಚಿಕೊಂಡಿದೆ. ಜನರು ಬಿಜೆಪಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ ಎಂಬ ತುರ್ತು ತೀರ್ಮಾನಕ್ಕೆ ಬಂದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜಾತ್ಯತೀತ ಪಕ್ಷಗಳೊಂದಿಗಿನ ಮೈತ್ರಿಯಿಂದ ಕಾಂಗ್ರೆಸ್ ದೂರವುಳಿದರೆ 2014ರ ಫಲಿತಾಂಶವು ಮರುಕಳಿಸುವುದರಲ್ಲಿ ಸಂಶಯವೇ ಇಲ್ಲ.

ಗಮನಾರ್ಹವಾದ ಇನ್ನೊಂದು ಫಲಿತಾಂಶ ಪ್ರಕಟಗೊಂಡಿರುವುದು ಛತ್ತೀಸ್‌ಗಢದಿಂದ. ಸುಮಾರು 15 ವರ್ಷಗಳಿಂದ ಇದು ಬಿಜೆಪಿಯ ಬಲಿಷ್ಠಕೋಟೆ. ಬಿಜೆಪಿಗರು ನಡೆಸಿದ ಹಗರಣ, ಪ್ರಕರಣಗಳೆಲ್ಲವೂ ಜನಸಾಮಾನ್ಯರ ದಿನಸಿ ಸಾಮಗ್ರಿಗಳಿಗೆ ಸಂಬಂಧಿಸಿದ್ದವುಗಳಾಗಿದ್ದವು. ಪಡಿತರ ವ್ಯವಸ್ಥೆಯನ್ನು ಬಿಜೆಪಿ ಕುಳಗಳು ತಮ್ಮ ದಂಧೆಯನ್ನಾಗಿಸಿಕೊಂಡಿದ್ದವು. ಮುಖ್ಯಮಂತ್ರಿ ರಮಮ್ ಸಿಂಗ್ ಚುನಾವಣಾ ಪ್ರಚಾರದ ವೇಳೆ ಉಪ್ಪು, ಅಕ್ಕಿ ಮುಂತಾದ ದಿನಸಿ ಸಾಮಗ್ರಿಗಳನ್ನು ಹಂಚುವ ಮೂಲಕ ಸುದ್ದಿಯಾಗಿದ್ದರು. ಅಂದರೆ ಜನಸಾಮಾನ್ಯರು ದಿನನಿತ್ಯದ ಸಾಮಗ್ರಿಗಳಿಗೆ ಪ್ರಯಾಸಪಡುವ ವಾತಾವರಣ ಅಲ್ಲಿ ನಿರ್ಮಾಣವಾಗಿತ್ತು. ದಲಿತ ವಿರೋಧಿ, ರೈತ ವಿರೋಧಿ ಸರಕಾರ ಆರೋಪವೂ ಇತ್ತು. ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ, 2013ರಲ್ಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಬಿಜೆಪಿ ಗೆಲುವು ಸಾಧಿಸುತ್ತಿತ್ತು. ಈ ಬಾರಿ ದಲಿತರು ಒಂದಾಗಿ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿದ್ದಾರೆ. 10 ಸೀಟುಗಳ 9ನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಇದಕ್ಕೆ ದೇಶಾದ್ಯಂತ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯವೂ ಪ್ರಮುಖ ಕಾರಣ.

ಒಟ್ಟಿನಲ್ಲಿ ಪಂಚರಾಜ್ಯಗಳ ಚುನಾವಣೆಯಲ್ಲಿ ಚಾಣಾಕ್ಷ ಮತದಾರರು ಗೆದ್ದಿದ್ದಾರೆ. ಕೋಮುವಾದಿ ಅಂಧಭಕ್ತ ಮತದಾರ ವರ್ಗ ಇನ್ನಷ್ಟೇ ಜಾಗತಗೊಳ್ಳಬೇಕಾಗಿದೆ. ಚುನಾವಣೆಯಲ್ಲಿ ರಾಜಕೀಯ ಚಾಣಾಕ್ಷತನ ಪ್ರದರ್ಶನಗೊಳ್ಳುವುದು ಪ್ರಜಾಪ್ರಭುತ್ವದ ಶೋಭೆಯಾಗಿದೆ. ಕೆಲವರನ್ನು ಎಲ್ಲ ಕಾಲದಲ್ಲೂ ಮೋಸಗೊಳಿಸಬಹುದು… ಆದರೆ ಎಲ್ಲರನ್ನು ಎಲ್ಲ ಕಾಲದಲ್ಲೂ ಮೋಸಗೊಳಿಸಲು ಸಾಧ್ಯವಿಲ್ಲ ಎಂಬ ಅಬ್ರಹಾಂ ಲಿಂಕನ್‌ರ ಮಾತು ನಿಜವಾಗಿದೆ. ಯಾವ ತಪ್ಪಿಗಾಗಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತೋ ಆ ತಪ್ಪನ್ನು ಪುನರಾವರ್ತಿಸದಿರುವುದೇ ಅದಕ್ಕಿರುವ ಮುಂದಿನ ದಾರಿ. ಫ್ಯಾಷಿಸಂ ವಿರುದ್ಧದ ತನ್ನ ಜಾತ್ಯತೀತ ನಿಲುವಿಗೆ ಬದ್ಧವಾಗಿರಲು ಮತದಾರರು ಕಾಂಗ್ರೆಸ್‌ಗೆ ಮತ್ತೊಂದು ಅವಕಾಶವನ್ನು ನೀಡಿದ್ದಾರೆ. ಈ ಅವಕಾಶವನ್ನು ಕೈಚೆಲ್ಲುವುದು ರಾಜಕೀಯ ಆತ್ಮಹತ್ಯೆಯಾದೀತು…