ನವದೆಹಲಿ : ಪಿಎನ್ ಬಿ ಹಗರಣದ ಆರೋಪಿ, ಡೊಮಿನಿಕಾದಲ್ಲಿ ಬಂಧಿಸಲ್ಪಟ್ಟಿರುವ ಮೆಹುಲ್ ಚೋಕ್ಸಿ ಇದೀಗ ಪೊಲೀಸ್ ಕಸ್ಟಡಿಯಲ್ಲಿದ್ದು, ಈ ಕುರಿತ ಫೋಟೊಗಳನ್ನು ಸ್ಥಳೀಯ ಮಾಧ್ಯಮಗಳು ಪ್ರಕಟಿಸಿವೆ.
ಮೆಹುಲ್ ಚೋಕ್ಸಿ ಅವರ ಬಂಧನದ ಅವಧಿಯನ್ನು ಅಲ್ಲಿನ ನ್ಯಾಯಾಲಯವು ಮುಂದಿನ ಬುಧವಾರದ ವರೆಗೆ ವಿಸ್ತರಿಸಿರುವುದರಿಂದ, ಅಲ್ಲಿ ವರೆಗೂ ಅವರು ಲಾಕಪ್ ನಲ್ಲಿರಲಿದ್ದಾರೆ. ಚೋಕ್ಸಿ ಕಂಬಿಯ ಹಿಂದೆ ನಿಂತಿರುವ ಕೆಲವೊಂದು ಫೋಟೊಗಳು ಹೊರಬಿದ್ದಿದ್ದು, ದೇಹದಲ್ಲಿ ಗಾಯದ ಗುರುತುಗಳು ಪತ್ತೆಯಾಗಿವೆ. ಮಾತ್ರವಲ್ಲದೆ ಕೈಯಲ್ಲಿ ಸುಟ್ಟ ಗಾಯಗಳು ಪತ್ತೆಯಾಗಿವೆ ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ.
ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಚೋಕ್ಸಿ ಪರ ವಕೀಲರು ಆಂಟಿಗುವಾ ಮತ್ತು ಬಾರ್ಬುಡಾದಿಂದ ಮೆಹುಲ್ ಚೋಕ್ಸಿ ಅಪಹರಿಸಲ್ಪಟ್ಟಿದ್ದು ಬಲವಂತವಾಗಿ ಡೊಮಿನಿಕಾಗೆ ಕರೆ ತರಲಾಗಿದೆ. ಇದೀಗ ಕಸ್ಟಡಿಯಲ್ಲಿ ಅವರ ಮೇಲೆ ದಾರುಣವಾಗಿ ಹಲ್ಲೆ ನಡೆಸಲಾಗಿದ್ದು, ದೇಹದ ಕೆಲವು ಭಾಗಗಳನ್ನು ಸುಡಲಾಗಿದೆ ಎಂದು ಆರೋಪಿಸಿದ್ದಾರೆ.