“ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯ ಅವರಿಗೆ ಪ್ರತಿ ಕೋವಿಡ್ ಲಸಿಕೆಗೆ 700 ರೂಪಾಯಿ ಕಮಿಷನ್ ನೀಡಬೇಕು ಸರ್” : ಆಡಿಯೋ ವೈರಲ್ !

Prasthutha|

►ಜೀವ ಉಳಿಸುವ ಕೋವಿಡ್ ಲಸಿಕೆಯಲ್ಲೂ ಬಿಜೆಪಿ ಶಾಸಕನ ದಂಧೆ ?
►ಶಾಸಕ ರವಿ ಸುಬ್ರಹ್ಮಣ್ಯ ಸಂಸದ ತೇಜಸ್ವಿ ಸೂರ್ಯ ಮಾವ !

- Advertisement -

ಬೆಡ್ ಬ್ಲಾಕಿಂಗ್ ದಂಧೆಯ ಬಗ್ಗೆ ಮಾತನಾಡಿ ಕೊನೆಯಲ್ಲಿ ಬಿಜೆಪಿ ಶಾಸಕ ಸತೀಶ್ ರೆಡ್ಡಿಯ ಆಪ್ತ ಬಳಗವೇ ಬಂಧನಕ್ಕೊಳಗಾಗಿ ಬಿಜೆಪಿ ಮುಜುಗರ ಅನುಭವಿಸಿರುವ ಘಟನೆಯ ಮಧ್ಯೆಯೇ ಮತ್ತೊಂದು ಸಂಕಟ ಬಿಜೆಪಿಗೆದುರಾಗಿದೆ. ಬಸವನಗುಡಿ ಬಿಜೆಪಿ ಶಾಸಕರಾಗಿರುವ ರವಿ ಸುಬ್ರಹ್ಮಣ್ಯ ಅವರಿಗೆ ಖಾಸಗಿ ಆಸ್ಪತ್ರೆಗಳಿಂದ ಕೋವಿಡ್  ಲಸಿಕೆಯ ಕಮಿಷನ್ ಹಣ ಹೋಗುತ್ತಿದೆ ಎಂಬ ಕುರಿತು ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಅವರು ಕಮಿಷನರ್ ಕಮಲ್ ಪಂತ್ ಅವರಿಗೆ ದೂರು ನೀಡಿದ್ದಾರೆ. ರವಿ ಸುಬ್ರಹ್ಮಣ್ಯ ಅವರು ಸಂಸದ ತೇಜಸ್ವಿ ಸೂರ್ಯ ಅವರ ಮಾವ ಎನ್ನುವುದು ಇಲ್ಲಿ ಮಹತ್ವದ ಅಂಶವಾಗಿದೆ.

ಆ ಹಗರಣದ ಕುರಿತು ಎರಡು ಆಡಿಯೋ ಕೂಡಾ ವೈರಲ್ ಆಗಿದೆ. ಮೊದಲ ಆಡಿಯೋದಲ್ಲಿ ವೆಂಕಟೇಶ್ ಅವರು ಎ ವಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಗೆ ಕರೆ ಮಾಡಿ ತನಗೆ ಲಸಿಕೆ ಬೇಕೆಂದು ಕೇಳಿದಾಗ, “ಲಸಿಕೆಗೆ 900 ರೂ ಆಗುತ್ತದೆ ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳುತ್ತಾರೆ. ಬಿಬಿಎಂಪಿಯಲ್ಲಿ ಉಚಿತವಾಗಿ ಸಿಗುತ್ತೆ ಎಂದಾಗ ನೀವು ಅಲ್ಲೇ ಹಾಕಿ ಎನ್ನುತ್ತಾರೆ. ನಮಗೆ ಬಂದಿರುವುದೇ ಬಿಬಿಎಂಪಿ ಕಡೆಯಿಂದ ರವಿ ಸುಬ್ರಹ್ಮಣ್ಯ ಅವರೇ ಕೊಡಿಸಿರೋದು. 900 ರೂಪಾಯಿಗೆ ಖರೀದಿ ಮಾಡಿದ್ದೇವೆ, ನಾವು ರವಿ ಸುಬ್ರಹ್ಮಣ್ಯ ಅವರಿಗೆ 700 ರೂಪಾಯಿ ಕೊಡಬೇಕು ಎಂದು ಹೇಳುತ್ತಾರೆ.

- Advertisement -

ಅದೇ ರೀತಿ ಮತ್ತೊಂದು ಆಸ್ಪತ್ರೆಗೆ ವೆಂಕಟೇಶ್ ಅವರು ಕರೆ ಮಾಡಿದಾಗಲೂ ಅಲ್ಲಿನ ಸಿಬ್ಬಂದಿ ಲಸಿಕೆ ಬೇಕೆಂದರೆ ರವಿ ಸುಬ್ರಹ್ಮಣ್ಯ ಅವರ ಕಚೇರಿಯಿಂದ ಅಥವಾ ವಾಸವಿ ಆಸ್ಪತ್ರೆಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಹೇಳುತ್ತಾರೆ. ಅಲ್ಲೂ ಕೂಡಾ 900 ರೂಪಾಯಿ ಲಸಿಕೆಗೆ ಕೊಡಬೇಕು ಎನ್ನುತ್ತಾರೆ. ಆ ಹಣ ರವಿ ಸುಬ್ರಹ್ಮಣ್ಯ ಅವರ ಕಚೇರಿಗೆ ಹೋಗುತ್ತದೆ ಎಂದು ಸಿಬ್ಬಂದಿ ಹೇಳುತ್ತಾರೆ.

ಬೆಡ್ ಬ್ಲಾಕಿಂದ್ ದಂಧೆ ಎಂದು ಕೋವಿಡ್ ವಾರ್ ರೂಮಿಗೆ ದಾಳಿ ಮಾಡಿ ಅಮಾಯಕ 17 ಜನ ಮುಸ್ಲಿಮ್ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದು ಹಾಕುವಂತೆ ಮಾಡಿದ್ದ ತೇಜಸ್ವಿ ಸೂರ್ಯ ಅವರ ಮಾವನಾಗಿದ್ದಾರೆ ಈ ರವಿ ಸುಬ್ರಹ್ಮಣ್ಯ. ಅಂದು ತೇಜಸ್ವಿ ಸೂರ್ಯ ಅವರ ಜೊತೆ ರವಿ ಸುಬ್ರಹ್ಮಣ್ಯ ಅವರೂ ಕೂಡಾ ಉಪಸ್ಥಿತರಿದ್ದರು.  ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಆ ಬಳಿಕ 11 ಜನರನ್ನು ಬಂಧಿಸಲಾಗಿತ್ತು. ಅವರಲ್ಲಿ ಹೆಚ್ಚಿನವರು ಬಿಜೆಪಿ ಶಾಸಕ ಸತೀಶ್ ರೆಡ್ಡಿಯವರ ಆಪ್ತರಾಗಿದ್ದಾರೆ ಎನ್ನುವುದು ಗಮನಿಸಬೇಕಾದ ಅಂಶವಾಗಿದೆ.

ಈ ಘಟನೆಯ ಕುರಿತಂತೆ ಪ್ರತಿಕ್ರಿಯೆ ನೀಡಿರುವ ರವಿ ಸುಬ್ರಹ್ಮಣ್ಯ ಅವರು, ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ. ಅದೇನೇ ಇದ್ದರೂ ಎರಡು ಆಸ್ಪತ್ರೆಗಳಲ್ಲಿ ರವಿ ಸುಬ್ರಹ್ಮಣ್ಯ ಅವರಿಗೆ ಕಮಿಷನ್ ಕೊಡಬೇಕು ಎಂದು ಹೇಳಿರುವುದು ವೆಂಕಟೇಶ್ ಅವರ ದೂರಿಗೆ ಪುಷ್ಟಿ ನೀಡಿದಂತಾಗಿದೆ.

Join Whatsapp