ಕೊರೋನಾ ಎದುರಿಸಲು ಸಿದ್ಧತೆ ಅಗತ್ಯ

0
95

ಕೊರೋನಾ ವೈರಸ್ ಇಡೀ ಜಗತ್ತನ್ನು ಸುತ್ತಿಕೊಂಡಿದೆ. ಚೀನಾದಿಂದ ಹರಡಿದ ಈ ವೈರಸ್ ಇದೀಗ ಯುರೋಪ್ ಮತ್ತು ಅಮೆರಿಕಾವನ್ನೂ ಬಿಟ್ಟಿಲ್ಲ. ಇರಾನ್ ನಂತರ ಇಟೆಲಿಯಲ್ಲೂ ಪರಿಸ್ಥಿತಿ ತೀವ್ರ ಚಿಂತಾಜನಕವಾಗಿದೆ. ಇರಾನ್‌ವೊಂದರಲ್ಲೇ 24 ಗಂಟೆಗಳೊಳಗಾಗಿ 150 ಜನರು ಸಾವನ್ನಪ್ಪಿರುವುದು ತೀವ್ರ ಆತಂಕಕಾರಿಯಾಗಿದೆ. ಈ ವರೆಗೆ ಅಲ್ಲಿ ಈ ಸಾಂಕ್ರಾಮಿಕ ರೋಗದಿಂದ 300ಕ್ಕೂ ಹೆಚ್ಚು ಜೀವಗಳು ಬಲಿಯಾಗಿವೆ. ಬ್ರಿಟನ್, ಜಪಾನ್, ದಕ್ಷಿಣ ಕೊರಿಯಾ, ಥೈಲ್ಯಾಂಡ್, ನೇಪಾಲ, ಪಾಕಿಸ್ತಾನ ಮೊದಲಾದ ದೇಶಗಳಲ್ಲೂ ಈ ವೈರಸ್ ಹಬ್ಬಿದೆ. ಇಡೀ ಜಗತ್ತಿನ 70 ಅಧಿಕ ರಾಷ್ಟ್ರಗಳು ಈ ಸೋಂಕಿನಿಂದಾಗಿ ತತ್ತರಿಸಿ ಹೋಗಿವೆ. ಕೋವಿಡ್ 19 ಸೋಂಕಿಗೆ ತುತ್ತಾಗಿ ಕೇವಲ ಎರಡು ತಿಂಗಳಲ್ಲಿ 3 ಸಾವಿರಕ್ಕೂ ಹೆಚ್ಚು ಜನರು ಬಲಿಯಾಗಿರುವುದು ವರದಿಯಾಗಿದೆ. ಜಗತ್ತಿನ ವಿವಿಧ ಭಾಗಗಳಲ್ಲಿ ಸುಮಾರು 90 ಸಾವಿರ ಮಂದಿ ಈ ಸೋಂಕಿಗೆ ತುತ್ತಾಗಿದ್ದಾರೆ. ಇಟೆಲಿಯಲ್ಲಿ ಬಹುತೇಕ ಕಡೆಗಳಲ್ಲಿ ಶಿಕ್ಷಣ ಸಂಸ್ಥೆಗಳು, ಸಿನಿಮಾ ಮಂದಿರಗಳು, ಕಚೇರಿಗಳು ಸ್ಥಗಿತಗೊಂಡಿವೆ. ಜನರು ಮನೆಯಿಂದ ಹೊರ ಬಂದರೆ ಅವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿದೆ. ಚೀನಾದಲ್ಲಿ ಯಾವ ರೀತಿಯಲ್ಲಿ ನಗರಗಳನ್ನು ಬಂದೀಖಾನೆಯನ್ನಾಗಿ ಮಾಡಲಾಗಿದೆಯೇ, ಅದೇ ರೀತಿಯ ವಾತಾವರಣ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಕಂಡು ಬರುತ್ತಿದೆ.

ಈ ಮಾರಕ ವೈರಸ್ ಭಾರತವನ್ನೂ ಬಿಟ್ಟಿಲ್ಲ. ಭಾರತದಲ್ಲಿ ಕೊರೋನಾ ಬಾಧಿತರ ಸಂಖ್ಯೆ 60ಕ್ಕೆ ತಲುಪಿದೆ. ಇತರ ರಾಜ್ಯಗಳಾದ ಹೈದರಾಬಾದ್, ಕೇರಳ, ಜೈಪುರ, ದಿಲ್ಲಿ, ಆಗ್ರಾ ಮೊದಲಾದ ಕಡೆಗಳಲ್ಲಿ ಸೋಂಕಿತರನ್ನು ಗುರುತಿಸಲಾಗಿದೆ. ಇತ್ತ ಕರ್ನಾಟಕದಲ್ಲೂ 4 ಮಂದಿಯಲ್ಲಿ ಸೋಂಕು ತಗಲಿರುವುದು ಪತ್ತೆಯಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ಹಲವು ಜಾಗೃತಿ ಮತ್ತು ವ್ಯವಸ್ಥೆಗಳ ಹೊರತಾಗಿಯೂ ಕೇರಳದಲ್ಲಿ ಒಂದು ಮಗು ಸಹಿತ 6 ಮಂದಿಗೆ ರೋಗ ಬಾಧಿಸಿರುವುದು ಪತ್ತೆಯಾಗಿತ್ತು. ಆದಾಗ್ಯೂ ಕೇರಳ ಸರಕಾರವು ಇದನ್ನು ಎದುರಿಸಲು ನಡೆಸಿದ ಕಾರ್ಯವು ಇತರ ರಾಜ್ಯಗಳಿಗೆ ಒಂದು ಮಾದರಿಯಾಗಿದೆ. ಜೊತೆಗೆ ಈ ವೈರಸ್ ವಿರುದ್ಧ ಹೋರಾಟನಿರತವಾಗಿರುವ ದೇಶದ ವಿವಿಧ ಕಡೆಗಳ ತಜ್ಞ ವೈದ್ಯರ ತಂಡಗಳ ಸೇವೆಯೂ ಶ್ಲಾಘನೀಯವಾಗಿದೆ.

ಇದೀಗ ಭಾರತದ ವಿವಿಧ ಭಾಗಗಳಲ್ಲಿ ಈ ಸೋಂಕು ತಗುಲಿದ ಹೊಸ ಪ್ರಕರಣಗಳು ವೇಗವಾಗಿ ಹರಡುತ್ತಿರುವುದು ಪತ್ತೆಯಾಗಿದೆ. ಪತ್ತೆಯಾಗಿರುವ ಪ್ರಕರಣಗಳು ಕೊರೋನಾ ಹರಡಿರುವ ದೇಶಗಳಿಂದ ಬಂದಿರುವ ಜನರಲ್ಲಿ ಕಂಡುಬಂದಿದೆ. ಇಂಥದ್ದರಲ್ಲಿ ಅವರ ಸಂಪರ್ಕದಲ್ಲಿದ್ದ ಜನರಿಗೆ ಸೋಂಕು ತಗಲಿರುವುದನ್ನು ಗುರುತಿಸುವುದು ಮುಂದಿನ ದಿನಗಳಲ್ಲಿ ಬಹಳಷ್ಟು ಸವಾಲಿನ ಕೆಲಸವಾಗಿದೆ. ಈಗಾಗಲೇ ದೇಶದ ವಿವಿಧ ನಗರಗಳಲ್ಲಿ ಶಾಲೆ, ಕಚೇರಿಗಳು ಮುಚ್ಚಲು ನಿರ್ಬಂಧಿತವಾಗುತ್ತಿವೆ. ವಿವಿಧ ಸಾರ್ವಜನಿಕ ಕಾರ್ಯಕ್ರಮಗಳೂ ರದ್ದಾಗುತ್ತಿರುವುದು ಕಂಡು ಬಂದಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆಯು ಹೆಚ್ಚಳವಾಗುತ್ತಿರುವುದು ಒಂದು ರೀತಿಯ ಆತಂಕವನ್ನು ಮೂಡಿಸಿದೆ. ಮಾರ್ಚ್ 2ರಂದು ಥಾಯ್ಲೆಂಡ್‌ನಿಂದ ಹಿಂದಿರುಗಿದ್ದ ಸುನೀತಾ ಎಂಬವರಿಗೆ ಶೀತ, ಕೆಮ್ಮು ಬಾಧಿಸಿತ್ತು. ಆದರೆ ಅವರು ಆಸ್ಪತ್ರೆಗೆ ತೆರಳಿದಾಗ ಅವರಿಗೆ ತುರ್ತು ಚಿಕಿತ್ಸೆ ದೊರಕಿರಲಿಲ್ಲ ಎಂಬ ವಿಚಾರವನ್ನು ಸ್ವತಃ ಅವರೇ ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಂತಹ ಸನ್ನಿವೇಶದಲ್ಲಿ ಈ ರೀತಿಯ ನಿರ್ಲಕ್ಷವೂ ಅಪಾಯಕಾರಿಯಾಗಿದೆ.

ತೀವ್ರವಾಗಿ ತತ್ತರಿಸಿರುವ ಹೊರತಾಗಿಯೂ, ಈ ಸೋಂಕಿನಿಂದ ಪಾರಾಗಲು ಚೀನಾ ತನ್ನ ಎಲ್ಲಾ ಶಕ್ತಿಯನ್ನು ಬಳಸಿಕೊಳ್ಳುತ್ತಿದೆ. ಅದೇ ವೇಳೆ ಈ ಮಹಾಮಾರಿ ವೈರಸ್ ವಿರುದ್ಧ ಭಾರತದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆಯಾದರೂ, ಇತರ ದೇಶಗಳಂತೆ ಸರಕಾರ ಗಂಭೀರವಾದಂತೆ ಕಂಡು ಬರುತ್ತಿಲ್ಲ. ಭಾರತದಲ್ಲಿ ಆರೋಗ್ಯ ಸೇವೆಗಳು ತೀರಾ ಕಳಪೆ ಮಟ್ಟದಲ್ಲಿವೆ. ಜೊತೆಗೆ ಆಕಸ್ಮಿಕವಾಗಿ ಬರುವ ಯಾವುದೇ ಮಹಾಮಾಹಿ ರೋಗಗಳನ್ನು ಎದುರಿಸಲು ಭಾರತದಲ್ಲಿ ಮೂಲಭೂತ ಸೌಕರ್ಯಗಳ ಲಭ್ಯವಿಲ್ಲ. ಇದೀಗ ಕಡಿಮೆ ಜನಸಂಖ್ಯೆಯಿರುವ ಇಟೆಲಿಯಂತಹ ದೇಶದಲ್ಲಿ ಈ ಸೋಂಕು ವೇಗವಾಗಿ ಹರಡುತ್ತಿದೆ. ಇಂಥದ್ದರಲ್ಲಿ ಅತಿಹೆಚ್ಚು ಜನಸಂಖ್ಯೆಯಿರುವ ಭಾರತವು ಈ ವೈರಸ್ ವಿರುದ್ಧ ಯಾವ ರೀತಿ ಹೋರಾಟ ನಡೆಸಲಿದೆ ಎಂಬುದು ಗಂಭೀರವಾದ ಪ್ರಶ್ನೆಯಾಗಿದೆ. ಒಂದು ವೇಳೆ ಈ ಸಾಂಕ್ರಾಮಿಕ ರೋಗವು ಮತ್ತಷ್ಟು ವ್ಯಾಪಕವಾದರೆ ಮಾಸ್ಕ್‌ಗಳು, ಪರೀಕ್ಷಣಾ ಕಿಟ್‌ಗಳು, ಅಗತ್ಯ ಚಿಕಿತ್ಸಾ ಸಾಮಗ್ರಿಗಳು ಲಭ್ಯವಾಗಲಿದೆಯೇ ಎಂಬ ವಿಚಾರದ ಕುರಿತು ಆಡಳಿತ ವ್ಯವಸ್ಥೆಯು ಈಗಿನಿಂದಲೇ ಎಚ್ಚರಗೊಳ್ಳಬೇಕಾಗಿದೆ. ಜೊತೆಗೆ ಜನರು ಕೂಡ ಈ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಕೈಜೋಡಿಸಬೇಕು. ಆರೋಗ್ಯ ಇಲಾಖೆ ಹೊರಡಿಸುವ ಸೂಚನೆಗಳನ್ನು ಪಾಲಿಸುತ್ತಾ ಸ್ವತಃ ಜಾಗೃತರಾಗಬೇಕು ಮತ್ತು ತಮ್ಮ ಬಳಗವನ್ನೂ ಜಾಗೃತಗೊಳಿಸಬೇಕಾಗಿದೆ.