ಸೂತಕದ ಮನೆಯಲ್ಲಿ ಸುಳ್ಳಿನ ರಾಜಕಾರಣ

Prasthutha|

-ರಮೇಶ್ ಎಸ್.ಪೆರ್ಲ

- Advertisement -

ಆಕ್ಸಿಜನ್ ಕೊರತೆಯಿಂದ ಚಾಮರಾಜನಗರದಲ್ಲಿ 24 ಮಂದಿ ಕೋವಿಡ್ ಸೋಂಕಿತರು ಮೃತಪಟ್ಟ ಪ್ರಕರಣ ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲ ಆಗಿರುವುದನ್ನು ಬಟ್ಟ ಬಯಲು ಮಾಡಿತ್ತು. ಕೊರೊನಾ ಎರಡನೇ ಅಲೆಯ ಮುನ್ಸೂಚನೆ ಸಾಕಷ್ಟು ಮುಂಚಿತವಾಗಿ ತಜ್ಞರು ನೀಡಿದ್ದರೂ ಸರಕಾರ ಮುಂಜಾಗೃತಾ ನಿರ್ಮಾಣಗಳನ್ನು ಕೈಗೊಳ್ಳಲಿಲ್ಲ. ತುರ್ತು ವೈದ್ಯಕೀಯ ಸೌಲಭ್ಯ ಏರ್ಪಾಡು ಕೂಡ ಮಾಡಿಕೊಳ್ಳಲಿಲ್ಲ.

ಈಗ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಯಾವುದೇ ಹುದ್ದೆಯನ್ನು ನೀಡದೆ ರವಿ ವರ್ಗಾವಣೆ ಮಾಡಲಾಗಿದೆ. ಸರಕಾರದ ವೈಫಲ್ಯಕ್ಕೊಂದು ಬಲಿ ಬೇಕಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದ ಮರುದಿನವೇ ಅಲ್ಲಿ ದುರಂತ ನಡೆದಿತ್ತು ಎನ್ನುವುದು ಗಮನಾರ್ಹ.

- Advertisement -

ಆಕ್ಸಿಜನ್ ಕೊರತೆಯಿಂದ ಜನರು ಸತ್ತಿಲ್ಲ. ಸತ್ತವರ ಸಂಖ್ಯೆ ಕಡಿಮೆ ಇದೆ. ಹೀಗೆಲ್ಲ ಒಟ್ಟು ದುರಂತವನ್ನು ಮುಚ್ಚಿ ಹಾಕಲು ಸರಕಾರ ಯತ್ನಿಸಿತ್ತು. ಆದರೆ, ಪ್ರತಿಪಕ್ಷಗಳು ದುರಂತದಲ್ಲಿ 24 ಮಂದಿ ಆಕ್ಸಿಜನ್ ಇಲ್ಲದೆ ಸತ್ತಿದ್ದಾರೆ ಎಂದು ವಾದಿಸಿದ್ದವು. ಕರ್ನಾಟಕ ಹೈಕೋರ್ಟ್ ನೇಮಿಸಿದ ನಿವತ್ತ ನ್ಯಾಯಮೂರ್ತಿ ಎ.ಎಸ್.ವೇಣುಗೋಪಾಲ್ ಗೌಡ ನೇತೃತ್ವದ ಸಮಿತಿ ಘಟನೆ ಬಗ್ಗೆ ತನಿಖೆ ನಡೆಸಿ, 24 ಮಂದಿ ಆಕ್ಸಿಜನ್ ಕೊರತೆಯಿಂದ ಸತ್ತಿದ್ದಾರೆ ಎಂದು ಖಚಿತಪಡಿಸಿತು.

ಚಾಮರಾಜನಗರ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮೇ 3ರ ರಾತ್ರಿ ಆಕ್ಸಿಜನ್ ಕೊರತೆ ಉಂಟಾಗಿತ್ತು. ರಾತ್ರಿ 10.30ರಿಂದ ಸುಮಾರು ನಾಲ್ಕು ಗಂಟೆಗಳ ಕಾಲ ಆಕ್ಸಿಜನ್ ಪೂರೈಕೆ ಇರಲಿಲ್ಲ. ಈ ಘಟನೆಗೆ ಜಿಲ್ಲಾ ಆಸ್ಪತ್ರೆ ಸಿಬ್ಬಂದಿ ಮತ್ತು ಜಿಲ್ಲಾಧಿಕಾರಿಗಳು ಹೊಣೆ ಎಂದು ತನಿಖಾ ವರದಿ ಬೊಟ್ಟು ಮಾಡಿದೆ.

ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಜನರು ಸತ್ತಿರುವುದು ರಾಜ್ಯ ಸರಕಾರಕ್ಕೊಂದು ಕಪ್ಪು ಚುಕ್ಕೆಯಾಗಿತ್ತು. ಇದರ ನಡುವೆ ಬೆಂಗಳೂರಿನಲ್ಲಿ ಆಡಳಿತ ಪಕ್ಷದ ಮುಖಂಡರ ಮೂಗಿನ ನೇರದಲ್ಲಿ ಬೆಡ್ ದಂಧೆ ನಡೆದಿತ್ತು. ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಸಹಿತ ಹಾಸಿಗೆ ಒದಗಿಸಲು 50 ಸಾವಿರದಿಂದ 70 ಸಾವಿರ ರೂಪಾಯಿ ತನಕ ಲಂಚ ನೀಡಬೇಕಾಗಿತ್ತು. ಈ ವ್ಯವಹಾರ ನೇರವಾಗಿ ಸರಕಾರವೇ ಆರಂಭಿಸಿದ ಕಂಟ್ರೋಲ್ ರೂಮಲ್ಲಿ ಸೇರಿಕೊಂಡಿದ್ದ ಮಧ್ಯವರ್ತಿಗಳು ಮೂಲಕ ನಡೆಯುತ್ತಿತ್ತು. ಯಾವುದೇ ಸರಕಾರಿ ಆಸ್ಪತ್ರೆಯಲ್ಲಿ, ಅದರಲ್ಲೂ ಕೋವಿಡ್ ಸಂಬಂಧಿ ಚಿಕಿತ್ಸೆಗೆ ಶುಲ್ಕ ತೆರುವ ಅಗತ್ಯವೇ ಇರುವುದಿಲ್ಲ. ಹಾಗಿದ್ದರೂ, ಆಡಳಿತ ಪಕ್ಷದ ಬೆಂಬಲಿಗರು ಮಧ್ಯವರ್ತಿಗಳನ್ನು ಇರಿಸಿಕೊಂಡದ್ದು ಈ ರೀತಿಯ ಅವ್ಯವಹಾರ ನಡೆಸುತ್ತಿರುವ ಬಗ್ಗೆ ಹಲವಾರು ವಾಯ್ಸ್ ಮೆಸೇಜ್ ವೈರಲ್ ಆಗಿತ್ತು.

ಅವ್ಯವಹಾರ ನಡೆಯುತ್ತಿರುವ ವಿಚಾರ ಮನಗಂಡ ಹಿರಿಯ ಅಧಿಕಾರಿಗಳು ತಪಾಸಣೆಗೆ ಮುಂದಾದರು. ಕಂಟ್ರೋಲ್ ರೂಮಿಗಿ ಹೋದ ಯುವ ಐಎಎಸ್ ಅಧಿಕಾರಿ ಯಶವಂತ್ ಅವರೊಂದಿಗೆ ಮಧ್ಯವರ್ತಿಗಳು ಮತ್ತು ಬಿಜೆಪಿಯ ಸ್ಥಳೀಯ ಶಾಸಕರ ಬೆಂಬಲಿಗರು ಅಸಭ್ಯವಾಗಿ ವರ್ತಿಸಿದ್ದರು. ಮಾತ್ರವಲ್ಲದೆ, ಪ್ರೊಬೆಷನರಿ ಅಧಿಕಾರಿಯ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ಐಎಎಸ್ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಅಧಿಕೃತವಾಗಿ ತನಿಖೆ ಆದೇಶ ನೀಡಿದ್ದರು. ಈ ಆದೇಶ ಹೊರಬಂದ ಮರುದಿನ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಂಟ್ರೋಲ್ ರೂಮಿಗೆ ನುಗ್ಗಿ ರಾದ್ಧಾಂತ ಮಾಡಿದ್ದರು. ಕಂಟ್ರೋಲ್ ರೂಮ್ ಸಿಬ್ಬಂದಿ ಇನ್ನೂರಕ್ಕೂ ಹೆಚ್ಚು ಮಂದಿ ಇದ್ದರೂ ಕೇವಲ ಮುಸ್ಲಿಮ್ ಸಿಬ್ಬಂದಿಯ ಹೆಸರು ಓದಿ ಹೇಳುವ ಮೂಲಕ ಕೋಮುವಾದ ಕಿಡಿ ಹತ್ತಿಸಿದರು.

ಸಂಸದ ಮತ್ತು ಕೆಲವು ಮಂದಿ ಬಿಜೆಪಿ ಶಾಸಕರು ಕಂಟ್ರೋಲ್ ರೂಮಿಗೆ ಹೋಗಿ ಸೀನ್ ಕ್ರಿಯೇಟ್ ಮಾಡಿದ್ದೇ ಚಾಮರಾಜನಗದ ದುರಂತ ಮತ್ತು ಸರಕಾರದ ವೈಫಲ್ಯಗಳನ್ನು ಮುಚ್ಚಿಡಲು. ಜನರ ಮತ್ತು ಮಾಧ್ಯಮಗಳ ಚರ್ಚಾ ವಿಚಾರ ಸೂರ್ಯನ ಕಂಟ್ರೋಲ್ ರೂಂ ಪ್ರವೇಶದಿಂದ ಬದಲಾಯಿತು. ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳು ಹಗರಣ ಬಯಲು ಮಾಡಿದ ಸೂರ್ಯ ಎಂದು ಕೊಂಡಾಡಿದರು. ಬಿಜೆಪಿ ಸರಕಾರದ್ದೆ ಹಗರಣ ಎಂದೂ ಯಾರೂ ಹೇಳಲಿಲ್ಲ.

ಒಂದೆರಡು ದಿನಗಳ ಅನಂತರ ತೇಜಸ್ವಿ ಸೂರ್ಯ ಮಾಡಿದ ಸಾಹಸ ಆತನಿಗೆ ತಿರುಗುಬಾಣವಾಯಿತು. ರಾಷ್ಟ್ರೀಯ ಮಾಧ್ಯಮಗಳಲ್ಲಿ, ಸೋಶಿಯಲ್ ಮಿಡಿಯಾಗಳಲ್ಲಿ ಹೀನಾ ಮಾನವಾಗಿ ಟ್ರೋಲ್ ಮಾಡಲಾಯಿತು. ಕೋಮುವಾದ ವಿಚಾರ ಮಾತ್ರವಲ್ಲದೆ ತನ್ನೊಂದಿಗಿದ್ದ ಬಿಜೆಪಿ ಶಾಸಕರ ಬೆಂಬಲಿಗರೇ ಈ ಬೆಡ್ ದಂಧೆಯಲ್ಲಿ ಶಾಮೀಲಾಗಿರುವುದು ಬೆಳಕಿಗೆ ಬಂತು. ಮಾಧ್ಯಮಗಳ ಎದುರು ಉತ್ತರಿಸಲಾಗದೆ ಚಟಪಡಿಸಿದ ತೇಜಸ್ವಿ ಸೂರ್ಯ ರಾಜಕೀಯ ಹೊಸ ಪಾಠ ಕಲಿಯಬೇಕಾಯಿತು.

ಆದರೆ, ಡ್ಯಾಮೇಜ್ ಆಗುವುದು ಆಗಿಯೇ ಹೋಯ್ತು. ಕೋಮುವಾದದ ರಾಜಕೀಯ ಲಾಭ ಬಿಜೆಪಿಗೆ ದೊರೆಯಿತು. ವಾಟ್ಸಪ್ ಮತ್ತು ಇತರ ಸೋಶಿಯಲ್ ಮಿಡಿಯಾಗಳಲ್ಲಿ ಮುಸ್ಲಿಮರ ಪರ ನಿಂತ ಪ್ರತಿಪಕ್ಷಗಳು, ಹಗರಣ ಬಯಲು ಮಾಡಿದ ಬಿಜೆಪಿ ಸಂಸದ ಎಂದೇ ಈಗಲೂ ಪ್ರಚಾರ ಆಗುತ್ತಿದೆ. ಐಟಿ ಸೆಲ್ಲಿನ ಪ್ರಬಲ ಆಯುಧ ಹೊಂದಿರುವ ಬಿಜೆಪಿಯ ಪ್ರೊಪಗಾಂಡ ಯಂತ್ರವನ್ನು ಸೋಲಿಸಲು ಯಾರಿಂದಲೂ ಸಾಧ್ಯ ಆಗುವುದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ.

ರಾಜ್ಯದಲ್ಲಿ ಮಾತ್ರವಲ್ಲದೆ ದೇಶದಲ್ಲೇ ಆಕ್ಸಿಜನ್ ಕೊರತೆ ಉಂಟಾದಾಗ 40 ದೇಶಗಳ ಜತೆಗೆ ತಕ್ಷಣಕ್ಕೆ ಸ್ಪಂದಿಸಿ ಆಕ್ಸಿಜನ್ ಮಾತ್ರವಲ್ಲದೆ ಖಾಲಿ ಸಿಲಿಂಡರ್ ಕೂಡ ನೀಡಿ ಸಹಾಯ ಮಾಡಿದವರು ಕೊಲ್ಲಿ ಪ್ರದೇಶದ ಮುಸ್ಲಿಮ್ ರಾಷ್ಟ್ರಗಳು. ಮುಸ್ಲಿಮ್ ವಿರೋಧಿ ಕೋಮುವಾದವನ್ನೇ ಪ್ರಧಾನ ಅಸ್ತ್ರವಾಗಿಸಿ ಅಧಿಕಾರಕ್ಕೆ ಬಂದಿರುವ ಸರಕಾರವೊಂದು ಯಾವ ಮುಲಾಜು ಇಲ್ಲದೆ ಮುಸ್ಲಿಮ್ ರಾಷ್ಟ್ರಗಳಿಂದ ವೈದ್ಯಕೀಯ ಸಹಾಯ ಸ್ವೀಕರಿಸಿತು. ಆದರೆ, ಬಿಜೆಪಿಯ ಸಂಸದರು, ಶಾಸಕರು ಮಾತ್ರ ಆಕ್ಸಿಜನ್ ನೀಡಿರುವುದಕ್ಕೆ ಕ್ರೆಡಿಟ್ ನೀಡಿದ್ದು ಪ್ರಧಾನಿ ನರೇಂದ್ರ ಮೋದಿ ಅವರಿಗೆ. ಆಕ್ಸಿಜನ್ ನೆರವು ನೀಡಿದವರಿಗೆ ಕೃತಜ್ಞತೆ ಸಲ್ಲಿಸುವುದಕ್ಕೂ ವ್ಯವಧಾನ ಇರಲಿಲ್ಲ. ಏಕೆಂದರೆ, ಅದಾಗಲೇ ಮೋದಿ ಅವರ ವರ್ಚಸ್ಸಿನ ಗ್ರಾಫ್ ಪತನಗೊಳ್ಳತೊಡಗಿತ್ತು.

ಇವೆಲ್ಲದರ ನಡುವೆ ಬಿಜೆಪಿ ಮುಖಂಡರಾದ ಸಿ.ಟಿ. ರವಿ, ಸದಾನಂದ ಗೌಡ, ಉಮೇಶ್ ಕತ್ತಿ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುವ ಮೂಲಕ ಭಾರತೀಯ ಜನತಾ ಪಾರ್ಟಿಗೆ ಜನ ಕಾಳಜಿ ಮುಖ್ಯವಲ್ಲ ಎಂಬುದನ್ನು ಸಾರಿ ಹೇಳಿದರು.ಊಟಕ್ಕಿಲ್ಲದೆ ನಾವು ಸಾಯಬೇಕೆ ಎಂದು ಜನರು ಕೇಳಿದರೆ ‘ಸಾಯಿರಿ’ ಎನ್ನುತ್ತಾರೆ ಬಿಜೆಪಿ ಸರಕಾರದ ಸಚಿವರು. ಆಕ್ಸಿಜನ್ ಉತ್ಪಾದನೆ ಆಗದಿದ್ದರೆ ನಾವೇನು ನೇಣು ಹಾಕಿಕೊಳ್ಳಬೇಕೆ ಎನ್ನುತ್ತಾರೆ ಕೇಂದ್ರ ಸಚಿವ ಸದಾನಂದ ಗೌಡ. ಆತ್ಮಹತ್ಯೆ ಯಾಕೆ ಮಾಡಿಕೊಳ್ಳುತ್ತೀರಿ. ಅಧಿಕಾರ ಬಿಟ್ಟು ಹೊರ ನಡೆಯಿರಿ ಎಂದರು ಜನ.

ಕೊರೋನಾ ಮೊದಲ ಹಂತದಲ್ಲೇ ನರೇಂದ್ರ ಮೋದಿ ಸರಕಾರ ಸಚಿವರೊಬ್ಬರು ಸಾವನ್ನಪ್ಪಿದ್ದರು. ಅನೇಕ ಮಂದಿ ಸಂಸದರು, ಶಾಸಕರು, ರಾಜಕೀಯ ಮುಖಂಡರು ಕೊರೊನಾ ಸೋಂಕಿನಿಂದ ಸತ್ತಿದ್ದಾರೆ. ಜನಸಾಮಾನ್ಯರು ಸತ್ತರೆ ಇಂತಹ ಸರಕಾರಗಳಿಗೆ ಲೆಕ್ಕಕ್ಕಿಲ್ಲ. ವಿಐಪಿಗಳು ಸತ್ತಾಗಲಾದರೂ ಸರಕಾರಗಳು ಎಚ್ಚೆತ್ತುಕೊಂಡು ಎರಡನೇ ಅಲೆ ವೇಳೆಗೆ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಿಕೊಳ್ಳಬೇಕಾಗಿತ್ತು. ಹಾಗೇ ಮಾಡಲೇ ಇಲ್ಲ. ಬಿಜೆಪಿಯೇತರ ರಾಜ್ಯಗಳ ಸರಕಾರಗಳು ಮಾತ್ರ ಆ ನಿಟ್ಟಿನಲ್ಲಿ ಕೊಂಚ ವ್ಯವಸ್ಥೆ ಮಾಡಿಕೊಂಡಿದ್ದವು. ಕೇರಳ ಸರಕಾರ ಆ ವಿಚಾರದಲ್ಲಿ ಮಾದರಿ ಆಗಿದೆ.

ದೇಶದಲ್ಲಿ ನಿರ್ಧಾರ ಕೈಗೊಳ್ಳುವುದು ಸಂಪೂರ್ಣ ಕೇಂದ್ರೀಕೃತ ಆಗಿರುವುದು ದೇಶದಲ್ಲಿ ಕೊರೊನಾ ನಿರ್ವಹಣೆಯ ವೈಫಲ್ಯಕ್ಕೆ ಮುಖ್ಯ ಕಾರಣ. ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಎಲ್ಲ  ತೀರ್ಮಾನಗಳು ಮೇಲಿಂದ ಬರಬೇಕು ಎಂದು ಅವರೇ ಒಪ್ಪಿಕೊಂಡಿದ್ದಾರೆ. ಕೇಂದ್ರ ಸರಕಾರದಲ್ಲಿ ಜವಾಬ್ದಾರಿಗಳ ಹಂಚಿಕೆ ಇಲ್ಲ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಂತಹ ಮುಖಂಡರ ಅನುಭವ, ಆಡಳಿತ ನಿಪುಣತೆಯನ್ನು ಬಳಸಿಕೊಳ್ಳಲು ಪ್ರಧಾನ ಸೇವಕರ ಸರ್ವಾಧಿಕಾರಿ ಪ್ರವೃತ್ತಿ ಒಪ್ಪುತ್ತಿಲ್ಲ. ಪರಿಣಾಮವಾಗಿ ಜನರು ಬೀದಿ ಬೀದಿಯಲ್ಲಿ ಸಾವನ್ನಪ್ಪಿದರು. ಆಸ್ಪತ್ರೆಗಳಲ್ಲಿ ಆಕ್ಸಿಜನ್, ಆಂಬ್ಯುಲೆನ್ಸ್, ಔಷಧಿ, ಹಾಸಿಗೆ, ವೆಂಟಿಲೇಟರ್ ಎಲ್ಲದಕ್ಕೂ ಜನರು ಅಲೆದಾಡಬೇಕಾಯಿತು. ಸೂಕ್ತ ಕಾಲದಲ್ಲಿ ಅಗತ್ಯ ವೈದಕ್ಯೀಯ ಸೌಲಭ್ಯ ದೊರೆಯದೆ ಸಾಲು ಸಾಲು ಮಂದಿ ಸಾವನ್ನಪ್ಪಿದರು. ಅಂತ್ಯಸಂಸ್ಕಾರಕ್ಕೂ ಪರದಾಡಬೇಕಾಯಿತು. ಹೆಣಗಳು ಹಿಂದೂಗಳು ಪವಿತ್ರ ಎಂದು ಹೇಳುವ ಗಂಗಾ ನದಿಯಲ್ಲಿ ತೇಲಿ ಬರತೊಡಗಿದವು. ಅಂತ್ಯಸಂಸ್ಕಾರ ನಡೆಸುವ ಪ್ರದೇಶಗಳು ವ್ಯಾಪಾರ ಕೇಂದ್ರಗಳಾಯಿತು. ಹೆಣ ಸುಡಲು ಸರಕಾರ ಕೂಡ ಶುಲ್ಕ ವಸೂಲಿ ಮಾಡತೊಡಗಿತು. ಸಿಬ್ಬಂದಿ ಲಂಚದ ಮೊತ್ತವನ್ನು ದುಪ್ಪಟ್ಟು ಮಾಡತೊಡಗಿದರು. ಶಾಂತಿಯಿಂದ ಸಾಯುವುದು ಆಗದಂತಹ ದುಸ್ಥಿತಿ ದೇಶದಲ್ಲಿ ನಿರ್ಮಾಣವಾಯಿತು. ಆದರೆ, ಅಧಿಕಾರ ವಹಿಸಿಕೊಂಡ ಮಂದಿಗೆ ಇದ್ಯಾವುದು ಕಾಣಿಸಲೇ ಇಲ್ಲ. ಕೇಂದ್ರ ಆರೋಗ್ಯ ಸಚಿವನಿಂದ ತೊಡಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ತನಕ ಸುಳ್ಳು ಅಂಕಿ ಅಂಶಗಳೊಂದಿಗೆ ಸತ್ಯಕ್ಕೆ ದೂರವಾದ ವಿಚಾರಗಳನ್ನೇ ಹೇಳತೊಡಗಿದರು.

ಉತ್ತರ ಪ್ರದೇಶದಲ್ಲಿ ಜನರನ್ನು ಶ್ರೀರಾಮಚಂದ್ರನೇ ಕಾಪಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ವತಃ ಅಲ್ಲಿನ ನ್ಯಾಯಾಲಯವೇ ರಾಜ್ಯದ ಆರೋಗ್ಯ ವ್ಯವಸ್ಥೆಯನ್ನು ದೇವರೇ ಕಾಪಾಡಬೇಕು ಎಂದು ಹೇಳಿತು. ಇದರ ವಿರುದ್ಧ ಯೋಗಿ ಸರ್ಕಾರ ಸುಪ್ರೀಂ ಕೋರ್ಟ್ ಮೊರೆಹೋಯಿತು. ಸುಪ್ರೀಂ ಕೋರ್ಟ್ ತಡೆ ನೀಡಲು ನಿರಾಕರಿಸಿ, ಅದನ್ನು ಸಲಹೆ ಎಂದು ಸ್ವೀಕರಿಸಿ ಎಂದು ಸಮಾಧಾನಪಡಿಸಿತು. ಯೋಗಿಯ ರಾಜ್ಯದಲ್ಲಿ ಕೊರೊನಾ ನಿರ್ವಹಣೆ ಮಾತ್ರ ಅತ್ಯಂತ ನಿಕೃಷ್ಟವಾಗಿದೆ. ಆಕ್ಸಿಜನ್ ಸಹಿತ ಯಾವುದೇ ಕೊರತೆಗಳನ್ನು ಬಹಿರಂಗ ಮಾಡಿದರೆ ಕ್ರಿಮಿನಲ್ ಕೇಸು ಹಾಕುವ ಬೆದರಿಕೆ ಹಾಕಲಾಯಿತು.

ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗ ತೊಡಗಿದಂತೆ ನಿರ್ವಹಣೆ ಕೂಡ ತುರ್ತು ಪರಿಸ್ಥಿತಿಯನ್ನು ನಿರ್ಮಾಣ ಮಾಡಿತು. ಅಂತಾರಾಷ್ಟ್ರೀಯ ಮಾಧ್ಯಮಗಳು ಭಾರತದ ಕೊರೊನಾ ನಿರ್ವಹಣೆಯ ವೈಫಲ್ಯವನ್ನು ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕೊರಳಿಗೆ ಕಟ್ಟಿವೆ. ದೇಶದಲ್ಲಿ ನಡೆಯುತ್ತಿರುವ ಸುದ್ದಿಗಳ ವಾಸ್ತವ ಚಿತ್ರಣವನ್ನು ವಿಶ್ವದ ಮುಂದೆ ಇರಿಸಲಾಯಿತು. ವೈಫಲ್ಯಗಳನ್ನು, ಅದರ ಹಿಂದಿರುವ ವಿಚಾರಗಳನ್ನು ಪಟ್ಟಿ ಮಾಡಲಾಯಿತು. ಎಲ್ಲವೂ ಭಾರತ ದೇಶವನ್ನು ವಿಶ್ವದೆದುರು ಬೆತ್ತಲು ಮಾಡಿ ದೇಶದ ಗೌರವ ಮಣ್ಣು ಮಾಡಲಾಯಿತು. ಇದಕ್ಕೆಲ್ಲ ಕಾರಣ ವಿಫಲ ನಾಯಕತ್ವ.

ತಮ್ಮ ತಪ್ಪುಗಳನ್ನು ಮರೆಮಾಚಲು ಪ್ರತಿಪಕ್ಷಗಳ ವಿರುದ್ಧ, ಮಾಧ್ಯಮಗಳ ವಿರುದ್ಧ ಕಟ್ಟು ಕತೆಗಳನ್ನು ಕಟ್ಟಲಾಯಿತು. ನಕಲಿ ಟೂಲ್ ಕಿಟ್ ಪ್ರೊಪಗಾಂಡ ಮೂಲಕ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲಾಯಿತು. ಕೃತಕ ಆಕ್ಸಿಜನ್ ಮೂಲಕ ಉಸಿರಾಟ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ಆ ಮೂಲಕ ಎಚ್ಚೆತ್ತು ಕೊಳ್ಳುವಂತಾಯಿತು. ಇದೆಲ್ಲದರ ನಡುವೆ ಗೋಧಿ ಮಿಡಿಯಾ ತನ್ನೆಲ್ಲ ಮರ್ಯಾದೆಗಳನ್ನು ಬದಿಗಿರಿಸಿ ಹಿಂದಿಗಿಂತಲೂ ಹೆಚ್ಚಿನ ಭಕ್ತಿ ಭಾವದಿಂದ ಸರಕಾರದ ಭಜನೆಯಲ್ಲಿ ತೊಡಗಿರುವುದು ಈ ದೇಶದ ದುರದೃಷ್ಟ.