ಪಾಟ್ನಾ : ಸಾರ್ವಜನಿಕ ಹ್ಯಾಂಡ್ ಪಂಪ್ ಬಳಸಿದ್ದಕ್ಕಾಗಿ ಜಾತಿವಾದಿ ಉಗ್ರರಿಂದ ಗಂಭೀರ ಹಲ್ಲೆಗೊಳಗಾಗಿದ್ದ ೪೫ರ ಹರೆಯದ ದಲಿತ ವ್ಯಕ್ತಿಯೊಬ್ಬರು ಸಾವಿಗೀಡಾದ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ಸರನ್ ಜಿಲ್ಲೆಯ ಭೇಲ್ದಿ ಪೊಲೀಸ್ ಠಾಣೆ ವ್ಯಾಪ್ತಿಯ ಮೌಲಾನಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಲ್ಲೆ ನಡೆದ ಕೆಲವು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಈ ಸಾವು ಸಂಭವಿಸಿದೆ. ಹತ್ಯೆಯಾದ ವ್ಯಕ್ತಿಯನ್ನು ಶಿವಪ್ರಸಾದ್ ರಾಮ್ ಎಂದು ಗುರುತಿಸಲಾಗಿದೆ.
ಘಟನೆಯನ್ನು ಖಂಡಿಸಿ ವಿವಿಧ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ರಸ್ತೆ ನಡೆಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ.
ಸಾರ್ವಜನಿಕ ಹ್ಯಾಂಡ್ ಪಂಪ್ ನಲ್ಲಿ ಕೈ-ಕಾಲು ತೊಳೆಯುತ್ತಿದ್ದರು ಎಂದು ಆಪಾದಿಸಿ ಜಾತಿವಾದಿ ಉಗ್ರರು ಮೃತ ರಾಮ್ ಸೇರಿದಂತೆ ಐವರು ದಲಿತರ ಮೇಲೆ ಭೀಕರ ಹಲ್ಲೆ ನಡೆಸಿದ್ದರು. ಮೇ ೧೨ರಂದು ಈ ಘಟನೆ ನಡೆದಿತ್ತು. ಆದರೆ, ಗಂಭೀರ ಗಾಯಗೊಂಡಿದ್ದ ರಾಮ್ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾನೆ.
ರಂಜಿತ್ ಕುಮಾರ್ ದ್ವಿವೇದಿ, ಪಂಕಜ್ ಶಾ, ಪ್ರಮೋದ್ ಶಾ, ಸಂತೋಷ್ ಶಾ, ನಾಗೇಂದ್ರ ಶಾ ಮುಂತಾದವರು ದಲಿತರ ಮೇಲೆ ಹಲ್ಲೆ ನಡೆಸಿದವರು. ದಲಿತರ ಮೇಲೆ ಹಲ್ಲೆ ನಡೆಸಿದುದಲ್ಲದೆ ಅವರ ಜಾತಿ ನಿಂದನೆ ಮಾಡಲಾಗಿತ್ತು. ದ್ವಿವೇದಿ ಪಿಸ್ತೂಲ್ ಹಿಡಿದು ದಲಿತರ ಮೇಲೆ ದೌರ್ಜನ್ಯ ಎಸಗಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪೊಲೀಸರು ಇಲ್ಲಿವರೆಗೂ ಯಾರನ್ನೂ ಬಂಧಿಸಿಲ್ಲ. ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.