ಲಕ್ಷದ್ವೀಪದ ಸುಧಾರಣೆಗಳಿಂದ ಸ್ಥಳೀಯರಿಗೆ ಸಂಕಟ; ಆಡಳಿತಗಾರನ ಬದಲಿಸಲು ಒತ್ತಡ

Prasthutha|

ನವದೆಹಲಿ : ಲಕ್ಷದ್ವೀಪದಲ್ಲಿ ಮಾಜಿ ಬಿಜೆಪಿ ನಾಯಕ ಪ್ರಫುಲ್‌ ಪಟೇಲ್‌ ಅವರನ್ನು ಹೊಸ ಆಡಳಿತಾಧಿಕಾರಿಯಾಗಿ ನೇಮಕಗೊಳಿಸಿದ ಬಳಿಕ ಒಂದಲ್ಲ ಒಂದು ಸಮಸ್ಯೆಗಳು ವರದಿಯಾಗುತ್ತಲೇ ಇವೆ. ತಮ್ಮ ಹಕ್ಕುಗಳನ್ನು ಮೊಟಕುಗೊಳಿಸಲು ಅವರು ಕಠಿಣ ಕಾನೂನುಗಳನ್ನು ಜಾರಿಗೊಳಿಸುತ್ತಿದ್ದಾರೆ ಎಂದು ಸ್ಥಳೀಯರು ಆಪಾದಿಸುತ್ತಿದ್ದಾರೆ.

- Advertisement -

2020, ಡಿ.5ರಂದು ಅಧಿಕಾರ ವಹಿಸಿಕೊಂಡ ಪಟೇಲ್‌, ಸ್ಥಳೀಯ ಜನಪ್ರತಿನಿಧಿಗಳ ಬಳಿ ಸಮಾಲೋಚಿಸದೆ ಕಾನೂನುಗಳನ್ನು ತಿದ್ದುಪಡಿ ಮಾಡುವ ಅಥವಾ ಬದಲಿಸುವ ಕೆಲಸಗಳನ್ನು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಇದರಿಂದಾಗಿ ಪ್ರದೇಶದಲ್ಲಿ ಭಾರೀ ಪ್ರತಿಭಟನೆಗಳು ನಡೆಯುತ್ತಿದ್ದು, ಅರಾಜಕತೆ ಆರಂಭವಾಗಿದೆ.

ದ್ವೀಪದ ಆಡಳಿತಾಧಿಕಾರಿಯಾಗಿದ್ದ ದೀಪಕ್‌ ಶರ್ಮಾರವರು ಅಕಾಲಿಕವಾಗಿ ನಿಧನ ಹೊಂದಿದ ಬಳಿಕ ಅಲ್ಲಿಗೆ ಪ್ರಧಾನಿ ಮೋದಿ ಮತ್ತು ಸಂಘ ಪರಿವಾರಕ್ಕೆ ಆತ್ಮೀಯರಾಗಿ ಗುರುತಿಸಿರುವ ಪಟೇಲ್‌ ರನ್ನು ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ. ಆಡಳಿತಾಧಿಕಾರಿ ಸ್ಥಾನಕ್ಕೆ ಐಎಎಸ್‌ ಆದವರನ್ನು ನೇಮಿಸುವ ಪರಂಪರೆಯಿದ್ದರೂ, ಬಿಜೆಪಿ ಮುಖಂಡರಾಗಿದ್ದ ಪಟೇಲ್‌ ರನ್ನು ನೇಮಿಸಲಾಗಿದೆ.

- Advertisement -

ಪಟೇಲ್‌ ನೇಮಕಗೊಂಡ ಬಳಿಕ ಎನ್‌ ಆರ್‌ ಸಿ/ಸಿಎಎ ವಿರೋಧಿ ಬೋರ್ಡ್‌ ಗಳನ್ನು ತೆರವುಗೊಳಿಸಲಾಗಿದೆ. ಮೀನುಗಾರಿಕೆಗೆ ನಿರ್ಮಿಸಲಾಗಿದ್ದ ಶೆಡ್‌ ಗಳನ್ನು ಕರಾವಳಿ ರಕ್ಷಣಾ ಕಾಯ್ದೆ ಹೆಸರಿನಲ್ಲಿ ಕೆಡವಲಾಗಿದೆ.

ದ್ವೀಪ ವಾಸಿಗಳ ಪ್ರಮುಖ ಆಹಾರವಾದ ಬೀಫ್‌ ನಿಷೇಧಿಸಲಾಗಿದೆ. ಶಾಲಾ ಮಕ್ಕಳ ಮಧ್ಯಾಹ್ನದ ಊಟದ ಮೆನುವಿನಿಂದ ಮಾಂಸಾಹಾರ ರದ್ದುಗೊಳಿಸಲಾಗಿದೆ. ಪಂಚಾಯತಿಗೆ ಸ್ಪರ್ಧಿಸುವವರು ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರಬಾರದು ಎಂದು ಆದೇಶಿಸಲಾಗಿದೆ. ಗೂಂಡಾ ಕಾಯ್ದೆಯನ್ನು ಜಾರಿಗೆ ತರಲಾಗಿದೆ.

ಇವೆಲ್ಲಾ ಪ್ರಕ್ರಿಯೆಗಳನ್ನು ವಿರೋಧಿಸಿ ಲಕ್ಷದ್ವೀಪದಲ್ಲಿ ಕೆಲವು ದಿನಗಳಿಂದ ಪ್ರತಿಭಟನೆ ಆರಂಭವಾಗಿದೆ. ಆಡಳಿತಾಧಿಕಾರಿ ಬದಲಾವಣೆಗೆ ಸ್ಥಳೀಯ ಜನಪ್ರತಿನಿಧಿಗಳಿಂದ ಒತ್ತಡ ಹೆಚ್ಚುತ್ತಿದೆ. ರಾಜ್ಯಸಭಾ ಸಂಸದ ಎಲಮಾರಂ ಕರೀಂ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಗೆ ಪತ್ರ ಬರೆದು, ಪಟೇಲ್‌ ಅವರನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.

ಲಕ್ಷದ್ವೀಪದ ನಾಗರಿಕರ ಪ್ರತಿಭಟನೆಗೆ ಖ್ಯಾತ ಮಲಯಾಳಂ ನಟ ಪೃಥ್ವಿರಾಜ್‌ ದನಿಗೂಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಲಕ್ಷದ್ವೀಪದಲ್ಲಿ ಅರಾಜಕತೆ ಪ್ರಾರಂಭವಾಗಿರುವ ಕುರಿತು ಹಲವರು ನನಗೆ ಸಂದೇಶ ಕಳುಹಿಸಿದ್ದರು. ಇದರ ವಿರುದ್ಧ ಮಾತನಾಡುವಂತೆ ಕೇಳಿಕೊಂಡಿದ್ದರು. ಯಾವುದೇ ಅಭಿವೃದ್ಧಿಗಳು ಅಲ್ಲಿನ ನೆಲಕ್ಕೆ ಸಂಬಂಧಿಸಿಲ್ಲ. ಅಲ್ಲಿನ ನಿವಾಸಿಗಳಿಗೆ ಸಂಬಂಧಿಸಿದ್ದಾಗಿದೆ. ಆದ್ದರಿಂದ ಇಲ್ಲಿನ ಜನರಿಗಾಗಿ ಧ್ವನಿಯೆತ್ತಿ ಎಂದವರು ಫೇಸ್‌ ಬುಕ್‌ ಪೋಸ್ಟ್‌ ನಲ್ಲಿ ಮನವಿ ಮಾಡಿದ್ದಾರೆ.

Join Whatsapp