ಬೆಂಗಳೂರು: ಮಾಜಿ ಸಚಿವ, ಮಂಗಳೂರು ಶಾಸಕ ಯುಟಿ ಖಾದರ್ ಅವರ ಹೆಸರಿನಲ್ಲಿ ಯುವಕನೋರ್ವ ನಕಲಿ ಪಾಸ್ ಬಳಸಿಕೊಂಡು, ಅದನ್ನು ದುರುಪಯೋಗಪಡಿಸಿಕೊಂಡ ಘಟನೆ ವರದಿಯಾಗಿದೆ. ನಿನ್ನೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಲಾಕ್ಡೌನ್ ಆದೇಶ ಪಾಲಿಸಲು ಕಟ್ಟುನಿಟ್ಟಿನ ಕ್ರಮ ಆದೇಶಿಸಿದ ಹಿನ್ನೆಲೆಯಲ್ಲಿ ಇಂದು ರಾಜಧಾನಿಯ ಹಲವೆಡೆ ಕ್ರಮ ಕೈಗೊಳ್ಳಲಾಗಿತ್ತು. ಈ ಸಂದರ್ಭ ಕೆಆರ್ ಪೇಟೆಯಲ್ಲಿ ತನಿಖೆ ನಡೆಸುತ್ತಿದ್ದ ಪೊಲೀಸರನ್ನ ಯುವಕನೊಬ್ಬ ಯಾಮಾರಿಸಲು ಮುಂದಾಗಿದ್ದಾನೆ. ತಪಾಸಣೆ ವೇಳೆ ಈ ಯುವಕ ತಾನು ಶಾಸಕ ಯುಟಿ ಖಾದರ್ ಸಹೋದರ ಹಾಗೂ ತಾನು ಚಲಾಯಿಸುತ್ತಿರುವ ಕಾರು ಶಾಸಕರಿಗೆ ಸಂಬಂಧಿಸಿದ್ದು ಎಂದು ತಿಳಿಸಿದ್ದಾನೆ. ಆದರೆ ಪಾಸ್ ಗಮನಿಸಿ ಸಂಶಯಗೊಂಡು ಪೊಲೀಸರು ಸ್ಥಳದಿಂದಲೇ ಯುಟಿ ಖಾದರ್ ಅವರಿಗೆ ಕರೆ ಮಾಡಿ ವಿಚಾರಿಸಿದಾಗ ನಿಜ ಸಂಗತಿ ಬಯಲಾಗಿದೆ. ತಕ್ಷಣ ಆತನನ್ನ ಕಾರು ಸಮೇತ ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.
ಈ ಕುರಿತು ಡಿಸಿಪಿ ಸಂಜೀವ್ ಪಾಟೀಲ್ ಅವರಿಗೆ ಕರೆ ಮಾಡಿ ಮಾತನಾಡಿರುವ ಶಾಸಕ ಯುಟಿ ಖಾದರ್, ನಾನು ಯಾರಿಗೂ ಪಾಸ್ ನೀಡಿಲ್ಲ ಎಂಬ ಮಾಹಿತಿ ನೀಡಿದ್ದಾರೆ. ಯುವಕ ಯಾರು..? ಆತನಿಗೆ ಪಾಸ್ ನೀಡಿದವರಾರು..? ಅನ್ನೋದರ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
ಈ ಹಿಂದೆ ಮಂಗಳೂರು ನಗರದಲ್ಲಿ ಅಪರಿಚಿತ ಬೈಕ್ ಸವಾರನೊಬ್ಬ ಶಾಸಕ ಯುಟಿ ಖಾದರ್ ಅವರ ಕಾರನ್ನ ಹಿಂಬಾಲಿಸಿಕೊಂಡು ಬಂದಿದ್ದು ಭಾರೀ ಸುದ್ದಿಯಾಗಿತ್ತು.