ಮತ್ತೊಮ್ಮೆ ಮಧ್ಯಪ್ರಾಚ್ಯ ಸಂಘರ್ಷ?

0
174

ಅಫ್ಘಾನ್ ಮತ್ತು ಇರಾಕಿನಲ್ಲಿ ದಾಳಿ ನಡೆಸಿ, 18 ವರ್ಷಗಳ ವರೆಗೆ ಯುದ್ಧ ಮಾಡಿದ ಮತ್ತು ಸಾವಿರಾರು ಜನರನ್ನು ಕೊಂದು ಹಾಕಿದ ಅಮೆರಿಕ ಇದೀಗ ಇರಾನಿನ ಮೇಲೆ ಅದರ ಕಬಂಧ ಬಾಹುಗಳನ್ನು ವಿಸ್ತರಿಸಲು ಪ್ರಯತ್ನಿಸಿದೆ. ಇರಾನಿನ ಸೇನಾ ಕಮಾಂಡರ್ ಜನರಲ್ ಖಾಸಿಂ ಸುಲೈಮಾನಿಯನ್ನು ಹತ್ಯೆಗೈಯ್ಯುವ ಮೂಲಕ ಅಮೆರಿಕದ ಆಡಳಿತವು ತಾವು ಜಾಗತಿಕ ಶಾಂತಿಗೆ ಬೆದರಿಕೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಶಾಂತಿ ಸ್ಥಾಪನೆಯ ಹೆಸರಿನಲ್ಲಿ ಅಮೆರಿಕ ಸ್ವಹಿತಾಸಕ್ತಿಗಾಗಿ ಇತರ ರಾಷ್ಟ್ರಗಳಲ್ಲಿ ಹಸ್ತಕ್ಷೇಪ ನಡೆಸಿ ಅಲ್ಲಿನ ಆಡಳಿತವನ್ನು ಅಸ್ಥಿರಗೊಳಿಸಿತು ಎಂಬುದನ್ನು ಬಿಟ್ಟರೆ ಬೇರೆ ಯಾವುದೇ ಪ್ರಯೋಜನವನ್ನು ಉಂಟುಮಾಡಿಲ್ಲ. ಹತ್ಯೆ, ಹಸಿವು, ನಿರುದ್ಯೋಗ ಮತ್ತು ಅಭದ್ರತೆಯ ಸ್ಥಿತಿಯನ್ನು ಇರಾಕ್, ಅಫ್ಘಾನ್ ಮತ್ತು ಸಿರಿಯಾ ಜಗತ್ತಿನ ಅನಾವರಣಗೊಳಿಸಿದೆ. ಮುಸ್ಲಿಮ್ ರಾಷ್ಟ್ರಗಳನ್ನು ಶಿಲುಬೆ ಯುದ್ಧದ ದೃಷ್ಟಿಯಲ್ಲಿ ನೋಡುತ್ತಾ, ಅದೇ ವೇಳೆ ಜಾಗತಿಕ ಭದ್ರತೆಯ ಮುಖವಾಡವನ್ನು ತೊಟ್ಟು ಅವರನ್ನು ನಾಶಪಡಿಸಲು ಅಮೆರಿಕ ಬಹಳ ಕಾಲಗಳಿಂದ ಇರಾನ್ ಮೇಲೆ ಗುರಿಯಿರಿಸಿತ್ತು. ಆದರೆ ಇರಾನ್‌ನೊಂದಿಗೆ ಯುದ್ಧ ನಡೆದರೆ ಅದು ಸೃಷ್ಟಿಸುವ ಕೆಟ್ಟ ಪರಿಣಾಮಗಳಿಗೆ ಅಮೆರಿಕ ಭಯಪಟ್ಟಿತ್ತು ಎನ್ನುವುದು ಸತ್ಯ.

ಈ ಹಿಂದಿನ ಅಧ್ಯಕ್ಷರಿಗೆ ಸಾಧ್ಯವಾಗದ ಕೆಲವೊಂದು ತನಗೆ ಸಾಧ್ಯವಿದೆ ಎಂದು ತೋರಿಸಿಕೊಳ್ಳಲು ಟ್ರಂಪ್ ಹಲವು ಬಾರಿ ತೀರ್ಮಾನಗಳನ್ನು ಕೈಗೊಂಡಿದ್ದಾರೆ. ಅದರ ಮುಂದುವರಿದ ಭಾಗವಾಗಿ ಇದೀಗ ಜನರಲ್ ಖಾಸಿಂ ಸುಲೈಮಾನಿಯನ್ನು ಹತ್ಯೆಗೈದ ಪ್ರಮಾದ ನಡೆದಿದೆ. ಕಟು ಮುಸ್ಲಿಮ್ ವಿರೋಧಿಯಾಗಿರುವ ಸ್ಟೇಟ್ ಸೆಕ್ರೆಟರಿ ಮೈಕ್ ಪಾಂಪಿಯೋನ ಸಲಹೆಯಂತೆ ಮುಂದುವರಿಯುತ್ತಿರುವ ಟ್ರಂಪ್‌ಗೆ, ಇರಾನ್ ಅನ್ನು ಎದುರಿಸುವ ವಿಚಾರದ ಹಿಂದೆ ಇಸ್ರೇಲ್‌ನ ಬಲಪಂಥೀಯ ಕ್ರೈಸ್ತರ ಬೆಂಬಲ ಇದೆ ಎಂಬುದು ಖಂಡಿತ. ಟ್ರಂಪ್‌ರ ಪೂರ್ವಾಧಿಕಾರಿ ಜಾರ್ಜ್ ಬುಷ್ ಸಹಿತವಿರುವ ರಿಪಬ್ಲಿಕನ್ ನೇತಾರರು ಮಧ್ಯಕಾಲದ ಶಿಲುಬೆ ಯುದ್ಧದ ಚಿಹ್ನೆಗಳು ಮತ್ತು ಆಶಯಗಳನ್ನು ಉಪಯೋಗಿಸಿದ್ದಾರೆ.
ಇರಾನಿನ ಪರಮೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈ ‘ಜೀವಿಸುತ್ತಿರುವ ಹುತಾತ್ಮ’ ಎಂದು ಕರೆದ ಸೇನಾ ದಂಡನಾಯಕರಾಗಿದ್ದರು ಜನರಲ್ ಖಾಸಿಮ್ ಸುಲೈಮಾನಿ. ಇರಾನಿಯರಿಗೆ ಅವರಷ್ಟು ಪ್ರೀತಿಯ ನಾಯಕನನ್ನು ಅಮೆರಿಕ ಇನ್ನಿಲ್ಲದಂತೆ ಮಾಡಿತು. ‘ಕ್ಷಮೆಯೊಂದಿಗೆ ಕಾಯಿರಿ, ಮಧ್ಯಪೂರ್ವ ರಾಷ್ಟ್ರಗಳೆಲ್ಲವೂ ಅಮೆರಿಕನ್ ಸೈನಿಕರ ಮೃತದೇಹಗಳು ಚದುರಿ ಬೀಳುವುದನ್ನು ಕಾಣಲು’ ಎಂಬ ಖಾಸಿಂ ಸುಲೈಮಾನಿಯ ಪರ್ಯಾಯವಾಗಿ ಬಂದ ಇಸ್ಮಾಯೀಲ್ ಘನಿಯ ಮಾತುಗಳು, ಆ ರಾಷ್ಟ್ರವು ತೀವ್ರ ಸ್ವರೂಪದಲ್ಲಿ ಅಮೆರಿಕಕ್ಕೆ ಜವಾಬು ನೀಡುತ್ತದೆ ಎಂಬುದು ವ್ಯಕ್ತ. ಇರಾಕ್‌ನ ಅಮೆರಿಕನ್ ಸೇನಾ ನೆಲೆಗಳಿಗೆ ಮಿಸೈಲ್ ದಾಳಿಯನ್ನು ನಡೆಸಿ ಇರಾನ್ ಅದನ್ನು ಆರಂಭಿಸಿದೆ.

ಇರಾನ್-ಅಮೆರಿಕ ಸಂಘರ್ಷವು ಮಧ್ಯಪ್ರಾಚ್ಯ ರಾಷ್ಟ್ರಗಳನ್ನು ಸಂಘರ್ಷಭರಿತಗೊಳಿಸಬಹುದು. ಟ್ರಂಪ್‌ನ ಆಕ್ರಮಣವು ಮಧ್ಯಪ್ರಾಚ್ಯ ರಾಷ್ಟ್ರಗಳ ಸ್ಥಿತಿಗತಿಗಳನ್ನು ಇನ್ನಷ್ಟು ಅಪಾಯಕಾರಿ ಹಂತಕ್ಕೆ ಕೊಂಡೊಯ್ಯುವುದೆಂದು ಅಮೆರಿಕನ್ ಡೆಮಾಕ್ರೆಟಿಕ್ ಸಂಸದರು ಸೂಚಿಸಿದ್ದು ಮತ್ತು ಅಮೆರಿಕದ ಜನಪ್ರತಿನಿಧಿ ಸಭೆ ಸ್ಪೀಕರ್ ನ್ಯಾನ್ಸಿ ಪೆಲೋಸಿ ಆಕ್ರಮಣವನ್ನು ಅತ್ಯಂತ ತೀವ್ರವಾಗಿ ಖಂಡಿಸಿದ್ದು, ಇವೆಲ್ಲದರ ಭವಿಷ್ಯವನ್ನು ನಿರೀಕ್ಷಿಸಿ ಆಗಿರಬೇಕು. ಒಟ್ಟಿನಲ್ಲಿ ಜಗತ್ತನ್ನು ಸಂಕಷ್ಟದ ಕೂಪಕ್ಕೆ ತಳ್ಳಿಯಾದರೂ, ತಮ್ಮ ಯಜಮಾನಿಕೆ ಎಂಬ ಝಿಯೋನಿಸಂನ ಆಕ್ರಮಣಶೀಲ ಸಂಸ್ಕೃತಿಯನ್ನು ಅಮೆರಿಕ ಅಧ್ಯಕ್ಷ ಮುಂದುವರಿಸುವ ವರೆಗೆ ಜಗತ್ತಿನಲ್ಲಿ ಶಾಂತಿ ಲಭಿಸದು ಎಂಬುದು ಸತ್ಯ.