ಮಂಗಳೂರು: ವೈದ್ಯರ ನಿರ್ಲಕ್ಷ್ಯದಿಂದಲೇ ಕೊರೊನಾ ಸೋಂಕಿತೆ ಮೃತ್ಯು ಆರೋಪ | ವೆನ್ಲಾಕ್ ಎದುರು ಕುಟುಂಬಸ್ಥರ ಆಕ್ರೋಶ

Prasthutha|

ಮಂಗಳೂರು: ನಗರದ ವೆನ್ಲಾಕ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಲೇ ಕೊರೊನಾ ಸೋಂಕಿತೆ ಮೃತಪಟ್ಟಿದ್ದಾರೆಂದು ಆರೋಪಿಸಿ ಮಹಿಳೆಯ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿ ಆಸ್ಪತ್ರೆಯ ಮುಂಭಾಗ ಗಲಾಟೆ ಮಾಡಿದ ಘಟನೆ ಇಂದು ರಾತ್ರಿ ನಡೆದಿದೆ.
ಬಳಿಕ‌ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

- Advertisement -

ಕೊರೊನಾ ಸೋಂಕಿತೆಯಾಗಿರುವ 51ರ ಹರೆಯದ ಮಹಿಳೆಯನ್ನು ಕುಟುಂಬಸ್ಥರು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಿದ್ದರು. ಉಸಿರಾಟದ ಸಮಸ್ಯೆಯಿದ್ದ ಅವರಿಗೆ ಆಕ್ಸಿಜನ್ ನೀಡಲಾಗಿತ್ತು. ಆ ಬಳಿಕವೂ ಅವರ ಉಸಿರಾಟದ ಸಮಸ್ಯೆ ಪರಿಹಾರವಾಗದ ಕಾರಣ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ರಾತ್ರಿ ಮೃತಪಟ್ಟಿದ್ದಾರೆ.

ಆದರೆ, ಮೃತ ಮಹಿಳೆಯ ಕುಟುಂಬಸ್ಥರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸೋಂಕಿತೆಯನ್ನು ಐಸಿಯುವಿನಿಂದ ಕ್ಯಾಶುವಲ್ಟಿಗೆ ಹಾಕಿರುವುದೇ ಸಾವಿಗೆ ಕಾರಣ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ‌. ಅಲ್ಲದೆ, ಆಸ್ಪತ್ರೆಯ ಮುಂಭಾಗ ಗಲಾಟೆ ಕೂಡ ಮಾಡಿದ್ದಾರೆ. ಬಳಿಕ ಪಾಂಡೇಶ್ವರ ಠಾಣೆ ಪೊಲೀಸರು ಮಧ್ಯಪ್ರವೇಶಿಸಿದ್ದು, ಶಾಸಕ ವೇದವ್ಯಾಸ ಕಾಮತ್ ಕೂಡ ಆಸ್ಪತ್ರೆಗೆ ಧಾವಿಸಿ ಕುಟುಂಬಸ್ಥರನ್ನು ಸಮಾಧಾನಿಸಿ, ಪರಿಸ್ಥಿತಿ ತಿಳಿಗೊಳಿಸಿದ್ದಾರೆ‌.



Join Whatsapp