ನಾವು ಹೇಳಿದ್ದು ಜನಹಿತದ ಲಾಕ್‌ಡೌನ್, ದನಕ್ಕೆ ಬಡಿದಂತೆ ಬಡಿಯೋ ಲಾಕ್‌ಡೌನ್ ಅಲ್ಲ : ಕುಮಾರಸ್ವಾಮಿ ಆಕ್ರೋಶ

Prasthutha|

ಬೆಂಗಳೂರು : ಲಾಕ್‌ಡೌನ್ ಅಲ್ಲದ ಕಠಿಣ ಲಾಕ್‌ಡೌನ್, ಜನ ಹೊರಗೆ ಬಂದರೆ ದನಕ್ಕೆ ಬಡಿದಂತೆ ಬಡಿಯುವ ಲಾಕ್‌ಡೌನ್ ಇಂದಿನಿಂದ ಜಾರಿಗೆ ಬರಲಿದೆ. ಜನಸಂಚಾರ ತಡೆಯುವುದೇ ಲಾಕ್‌ಡೌನ್ ಎಂದು ಭಾವಿಸಿರುವ ಸರ್ಕಾರ ಸಂಕಷ್ಟದಲ್ಲಿರುವ ನಾಗರಿಕರನ್ನು ಮರೆತಿರುವುದು ದುರಂತ. ನಾವು ಸೂಚಿಸಿದ ಲಾಕ್‌ಡೌನ್ ಇದಾಗಿರಲಿಲ್ಲ. ನಾವು ಹೇಳಿದ್ದು ಜನಹಿತದ ಲಾಕ್‌ಡೌನ್ ಆಗಿತ್ತು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಅವರು, ಲಾಕ್‌ಡೌನ್ ಮಾಡಿ ಜನರ ಜೀವ ಉಳಿಸಿ ಎಂದು ನಾನು ಮೊದಲೇ ಹೇಳಿದ್ದೆ. ಹಾಗೆ ಹೇಳುವಾಗ ಲಾಕ್‌ಡೌನ್ ನಿಂದ ಜನ ಜೀವನಕ್ಕೆ ಆಗುವ ತೊಂದರೆಗಳಿಗೆ ಪರಿಹಾರ ಕ್ರಮಗಳಿರಬೇಕು, ಜನರ ಅಗತ್ಯವನ್ನು ಸರ್ಕಾರ ಭರಿಸಬೇಕೆಂದು ಹೇಳಿದ್ದೆ. ಆದರೆ, ಲಾಕ್‌ಡೌನ್ ಸಂದರ್ಭದಲ್ಲಿ ನೀಡಬೇಕಾದ ಪರಿಹಾರ ಕ್ರಮಗಳಿಂದ ವಿಮುಖವಾಗಿರುವ ಸರ್ಕಾರ ಬೇಜವಾಬ್ದಾರಿತನ ತೋರಿದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜನರಿಗೆ ಎಲ್ಲಿ ಪರಿಹಾರ ನೀಡಬೇಕಾಗುತ್ತದೆಯೋ, ಜೀವನ ನಿರ್ವಹಣೆಗೆ ನೆರವು ನೀಡಬೇಕಾಗಿ ಬರುತ್ತದೆಯೋ ಎಂಬ ದುರಾಲೋಚನೆ ಮಾಡಿರುವ ಸರ್ಕಾರ ಲಾಕ್‌ಡೌನ್ ಎಂಬ ಪದವನ್ನು ಧೈರ್ಯದಿಂದ ಹೇಳುತ್ತಲೇ ಇಲ್ಲ. ಕಠಿಣ ನಿಯಮ ಎಂದು ಹೇಳಿ ಲಾಕ್‌ಡೌನ್ ನಿಂದ ದೂರ ನಿಂತಿದೆ. ಕೇಂದ್ರವೂ ಇದೇ ಕುತಂತ್ರದ ನಡೆಯನ್ನು ಅನುಸರಿಸಿ ಜವಾಬ್ದಾರಿಯಿಂದ ನುಣುಚಿಕೊಂಡಿದೆ ಎಂದು ಅವರು ಕಿಡಿ ಕಾರಿದ್ದಾರೆ.

- Advertisement -

ಲಾಕ್‌ಡೌನ್ ಎಂದರೆ ಜನ ಹೊರ ಹೋಗಲಾಗದ ಪರಿಸ್ಥಿತಿ. ಬದುಕಿನ ಅಗತ್ಯವನ್ನು ದುಡಿದುಕೊಳ್ಳಲಾಗದ ದುಸ್ಥಿತಿ. ಸರ್ಕಾರವೇ ಇದರ ಹೊಣೆಗಾರ, ಅದಕ್ಕೆ ಸರ್ಕಾರವೇ ಪರಿಹಾರ ನೀಡಬೇಕು ಎಂಬುದೂ ನನ್ನ ನಿಲುವು, ಸಲಹೆ. ಸರ್ಕಾರ ಸಂಪೂರ್ಣ ಲಾಕ್‌ಡೌನ್ ಘೋಷಿಸಬೇಕಿತ್ತು ಮತ್ತು ಪರಿಹಾರ ನೀಡಬೇಕಿತ್ತು. ಆದರೆ ಈವರೆಗೆ ಪರಿಹಾರ ಪ್ಯಾಕೇಜ್ ನ ಮಾತೇ ಇಲ್ಲ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಕೇಂದ್ರ ಸರ್ಕಾರಕ್ಕೆ ಕಾಯದೇ ಲಾಕ್ ಡೌನ್ ಮಾಡಿವೆ. ಜನರಿಗೆ ಆಹಾರ ಸೇರಿದಂತೆ ಪರಿಹಾರ ಘೋಷಿಸಿವೆ. ಆಂಧ್ರದಲ್ಲಿ ಸೋಂಕಿತರಿಗೆ ಉಚಿತ ಚಿಕಿತ್ಸೆ ಸಿಗುತ್ತಿದೆ. ಇದು ಸರ್ಕಾರಗಳ ಜವಾಬ್ದಾರಿಯುತ ನಡೆ. ಆದರೆ, ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೇಂದ್ರದ ದುರ್ನಡೆಯನ್ನು ರಾಜ್ಯ ಅನುಸರಿಸಬಾರದು ಎಂದು ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಮನೆಗಳಿಂದ ಹೊರ ಬರುವ ಜನರ ಮೇಲೆ ದರ್ಪ ಪ್ರದರ್ಶಿಸುವುದನ್ನು ಬಿಟ್ಟು, ಜನ ಹೊರಗೆ ಬಾರದಂತೆ ಅವರ ಅಗತ್ಯಗಳನ್ನು ಪೂರೈಸುವ, ಪರಿಹಾರ ಒದಗಿಸುವ ಕ್ರಮಗಳತ್ತ ಸರ್ಕಾರ ಗಮನಹರಿಸಬೇಕು. ಈ ವಿಚಾರದಲ್ಲಿ ನೆರೆ ರಾಜ್ಯಗಳು ಅನುಸರಿಸುತ್ತಿರುವ ಕ್ರಮಗಳನ್ನು ರಾಜ್ಯ ಅವಲೋಕಿಸಬೇಕು. ಜನರ ಆರೋಗ್ಯ ಎಷ್ಟು ಮುಖ್ಯವೋ ಜನರ ಬದುಕೂ ಅಷ್ಟೇ ಮುಖ್ಯವಾಗಬೇಕು ಎಂದು ಅವರು ಸರಕಾರಕ್ಕೆ ಕಿವಿಮಾತು ಹೇಳಿದ್ದಾರೆ.

Join Whatsapp