ಬೀದರ್: ಮಾಜಿ ಶಾಸಕ ಝುಲ್ಫೇಕರ್ ಹಾಸ್ಮಿ ಅವರು ಮೂತ್ರಪಿಂಡ ವೈಫಲ್ಯದಿಂದಾಗಿ ಇಂದು ಬೆಳಗಿನ ಜಾವ ಹೈದರಾಬಾದ್ನಲ್ಲಿ ನಿಧನರಾಗಿದ್ದಾರೆ.
57 ವರ್ಷದ ಝುಲ್ಫೇಕರ್ ಅವರಿಗೆ ಪತ್ನಿ, ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಅವರು ಕಳೆದ ನಾಲ್ಕು ತಿಂಗಳಿಂದ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ಎರಡು ದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನು ಹೈದರಾಬಾದ್ನ ಆಸರಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಝುಲ್ಫೇಕರ್ ಹಾಸ್ಮಿಯವರ ಅಂತಿಮ ದರ್ಶನ ನಗರದ ಜುಮಾ ಮಸೀದಿಯಲ್ಲಿ ಇಂದು (ಮಂಗಳವಾರ) ಮಧ್ಯಾಹ್ನ 1.30 ಗಂಟೆಗೆ ನಡೆಯಲಿದೆ. ಬೀದರ್ ತಾಲ್ಲೂಕಿನ ಅಷ್ಟೂರಿನ ಅವರ ಹೊಲದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಹಾಸ್ಮಿ 27ನೇ ವಯಸ್ಸಿನಲ್ಲೇ ರಾಜಕೀಯ ಪ್ರವೇಶ ಮಾಡಿದ್ದರು. 30 ವರ್ಷ ರಾಜಕೀಯದಲ್ಲಿ ಸಕ್ರೀಯವಾಗಿದ್ದರು. 1994ರಲ್ಲಿ ಬಿಎಸ್ಪಿಯಿಂದ ಬೀದರ್ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ದಕ್ಷಿಣ ಭಾರತದಲ್ಲಿ ಬಿಎಸ್ಪಿ ಖಾತೆ ತೆರೆದ ಮೊದಲ ವ್ಯಕ್ತಿ ಎನ್ನುವ ಶ್ರೇಯಸ್ಸಿಗೆ ಪಾತ್ರರಾಗಿದ್ದರು.
ನಂತರ ಜೆಡಿಎಸ್ನಿಂದ ಬೀದರ್ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದ ಅವರು ಕೆಲ ವರ್ಷ ಕಾಂಗ್ರೆಸ್ನಲ್ಲೂ ಗುರುತಿಸಿಕೊಂಡಿದ್ದರು. ಜನ ಸಾಮಾನ್ಯರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಿದ್ದರು.