ರಾಜ್ಯದ ಪ್ರತಿ ಕೊರೊನಾ ಸಾವೂ ಸರ್ಕಾರಿ ಪ್ರಾಯೋಜಿತ ಕೊಲೆ : ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಗಂಭೀರ ಆರೋಪ

Prasthutha|

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಕೊರೊನಾದಿಂದ ಸಂಭವಿಸುತ್ತಿರುವ ಪ್ರತೀ ಸಾವೂ ಕೂಡ ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ಸರ್ಕಾರದ ವಿರುದ್ಧ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.

- Advertisement -

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ ಕೊರೊನಾದಿಂದ ಸಂಭವಿಸುತ್ತಿರುವ ಪ್ರತೀ ಸಾವೂ ಕೂಡ ಸರ್ಕಾರಿ ಪ್ರಾಯೋಜಿತ ಕೊಲೆ. ಆಸ್ಪತ್ರೆಗಳಲ್ಲಿ ರೆಮ್ ಡೆಸಿವರ್ ಇಲ್ಲ, ಬೆಡ್ ಇಲ್ಲ, ಆಕ್ಸಿಜನ್ ಇಲ್ಲ, ವೆಂಟಿಲೇಟರ್ ಇಲ್ಲ, ವ್ಯಾಕ್ಸಿನ್ ಕೊರತೆಯ ಸ್ಥಿತಿ ನಿರ್ಮಾಣವಾಗಿದೆ. ಜನರಿಗೆ ಕನಿಷ್ಠ ಚಿಕಿತ್ಸೆಯನ್ನೂ ನೀಡಲಾಗದ ಈ ಸರ್ಕಾರ ಯಾವ ಪುರುಷಾರ್ಥಕ್ಕೆ ಬೇಕು..? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಕೊರೊನಾ 2ನೇ ಅಲೆ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ ನಂತರವೂ ಸರ್ಕಾರ ಎಚ್ಚೆತ್ತುಕೊಳ್ಳದ ಪರಿಣಾಮ ಇವತ್ತು ರಾಜ್ಯದ ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ, ಆಕ್ಸಿಜನ್ ಇಲ್ಲದೇ ಜನ ಸಾಯುವಂತಹ ಪರಿಸ್ಥಿತಿ ನಿರ್ಮಾಣಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪ ಮಾಡಿದ್ದಾರೆ.

- Advertisement -

ಮೇ ತಿಂಗಳ ಅಂತ್ಯದ ವೇಳೆಗೆ ರಾಜ್ಯದಲ್ಲಿ ಕೊರೊನಾ ವೈರಸ್​ನ ತೀವ್ರತೆ ಇನ್ನಷ್ಟು ಹೆಚ್ಚಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಮುಂದೆ ಎದುರಾಗಲಿರೋ ಭೀಕರ ಪರಿಸ್ಥಿತಿಗೆ ಸಜ್ಜಾಗಬೇಕಾದ ಸರ್ಕಾರ ಆಸ್ಪತ್ರೆಗಳಲ್ಲಿ ಬೆಡ್ ಹೆಚ್ಚಳ, ಆಯಕ್ಸಿಜನ್ , ವೆಂಟಿಲೇಟರ್ ವ್ಯವಸ್ಥೆ ಮಾಡುವುದು ಬಿಟ್ಟು ಜನರ ಜೀವಗಳ ಜತೆ ಚೆಲ್ಲಾಟವಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು ನಗರದಲ್ಲಂತೂ ಪರಿಸ್ಥಿತಿ ಕೈ ಮೀರಿ ಹೋಗಿದೆ ರೋಗಿಗಳು ಬೆಡ್ ಇಲ್ಲದೇ ಸಾಯುತ್ತಿದ್ದಾರೆ. ಆಯಕ್ಸಿಜನ್ ಇಲ್ಲದೇ, ವೆಂಟಿಲೇಟರ್ ಇಲ್ಲದೇ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಷ್ಟಾದರೂ ಸರ್ಕಾರ ಏನೂ ಆಗೇ ಇಲ್ಲ, ಆಯಕ್ಸಿಜನ್ ಕೊರತೆ ಇಲ್ಲ ಎಂದು ಭಂಡತನದ ಮಾತುಗಳನ್ನಾಡುತ್ತಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

Join Whatsapp