ಬೆಂಗಳೂರು : ಕೋವಿಡ್ ನಿಯಂತ್ರಣ ಸಂಬಂಧ ಚರ್ಚೆ ನಡೆಸಲು ಇಂದು ರಾಜ್ಯಪಾಲರು ಸರ್ವಪಕ್ಷ ಸಭೆ ಕರೆದಿರುವ ಬಗ್ಗೆ ಬಿಜೆಪಿ ಸರ್ಕಾರವನ್ನು ರಾಜ್ಯ ಕಾಂಗ್ರೆಸ್ ಘಟಕ ಟೀಕಿಸಿದೆ.
ಈ ಕುರಿತುಟ್ವೀಟ್ ಮಾಡಿರುವ ಕಾಂಗ್ರೆಸ್, “ರಾಜ್ಯಪಾಲರು ಸರ್ವಪಕ್ಷ ಸಭೆ ಕರೆದಿರುವುದು ಏನು ಸೂಚಿಸುತ್ತದೆ? ರಾಜ್ಯದಲ್ಲಿ ಚುನಾಯಿತ ಸರ್ಕಾರವಿಲ್ಲವೇ? ಸರ್ಕಾರದ ಅಸಮರ್ಥ್ಯವೇ ಅಥವಾ ಬಿಎಸ್ ವೈ ಮುಕ್ತ ಬಿಜೆಪಿ ಅಭಿಯಾನದ ಬಾಗವೇ? ಸರ್ಕಾರಕ್ಕೆ ವಿಪಕ್ಷಗಳನ್ನು ಎದುರಿಸುವ ಮುಖವಿಲ್ಲವೇ? ಅಥವಾ ಪರಿಸ್ಥಿತಿ ಎದುರಿಸಲಾಗದೆ ಕೈ ಚೆಲ್ಲಿದೆಯೇ? ಇಂತಹ ಮುಖಹೇಡಿ ಸರ್ಕಾರದಿಂದ ಜನರ ಜೀವ ಉಳಿಸುವುದು ಸಾಧ್ಯವಿಲ್ಲ.” ಎಂದು ಹೇಳಿದೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಇಂದು ರಾಜ್ಯಪಾಲ ವಿ.ಆರ್. ವಾಲಾ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ನಾಯಕರ ಸಭೆ ನಡೆಯಲಿದ್ದು, ಬೆಂಗಳೂರು ಹಾಗೂ ರಾಜ್ಯಾದ್ಯಂತ ಕಠಿಣ ಕ್ರಮಗಳ ಆದೇಶ ಹೊರ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.