ಕೋವಿಡ್ ಪರಿಹಾರ ಸೇವೆಗಳನ್ನು ತೀವ್ರಗೊಳಿಸಲಿದ್ದೇವೆ : ಪಾಪ್ಯುಲರ್ ಫ್ರಂಟ್

Prasthutha|

ದೇಶದಲ್ಲೆಡೆ ಕೊರೋನ ದಾಖಲೆಯ ಪ್ರಕರಣಗಳು ಮತ್ತು ಪರಿಸ್ಥಿತಿ ಕೈಮೀರುತ್ತಿರುವ ಸನ್ನಿವೇಶವನ್ನು ಗಮನದಲ್ಲಿರಿಸಿಕೊಂಡು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೊರೋನಾಗೆ ಸಂಬಂಧಿಸಿದ ತನ್ನ ಪರಿಹಾರ ಮತ್ತು ಸ್ವಯಂಸೇವಾ ಚಟುವಟಿಕೆಗಳನ್ನು ತೀವ್ರಗೊಳಿಸಲಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಹೇಳಿದ್ದಾರೆ.

- Advertisement -

“ಆಡಳಿತ ವರ್ಗ, ಆರೋಗ್ಯ ಕಾರ್ಯಕರ್ತರಿಗೆ ನೆರವಾಗಲು ಮತ್ತು ಕೋವಿಡ್ ರೋಗಿಗಳಿಗೆ ವೈದ್ಯಕೀಯ ಹಾಗೂ ಮಾನವೀಯ ಪರಿಹಾರ ಕಲ್ಪಿಸಲು ಮತ್ತಷ್ಟು ಸ್ವಯಂಸೇವಕರನ್ನು ಸಜ್ಜುಗೊಳಿಸಲು ಪಾಪ್ಯುಲರ್ ಫ್ರಂಟ್ ನಿರ್ಧರಿಸಿದೆ. ಆಸ್ಪತ್ರೆ, ಕೋವಿಡ್ ಕೇಂದ್ರಗಳು ಮತ್ತು ಅಂತಿಮ ಸಂಸ್ಕಾರದ ಕಾರ್ಯಗಳಿಗೆ ಯಾವುದೇ ಸರಕಾರಿ ಏಜೆನ್ಸಿಗಳಿಗೆ ಸ್ವಯಂ ಸೇವೆಯ ಅಗತ್ಯವಿದ್ದರೆ ನಮ್ಮ ಸ್ಥಳೀಯ ಘಟಕವನ್ನು ಸಂಪರ್ಕಿಸಬಹುದು. ಕೋವಿಡ್ ಗೆ ಸಂಬಂಧಿಸಿದ ಸೇವೆಗಳಲ್ಲಿ ಕಾರ್ಯ ನಿರ್ವಹಿಸುವ ಸರಕಾರೇತರ ಸಂಸ್ಥೆಗಳೊಂದಿಗೂ ಪಾಪ್ಯುಲರ್ ಫ್ರಂಟ್ ಸಹಯೋಗ ಹೊಂದಲಿದೆ.

ಮಾರ್ಚ್ 2020ರ ಲಾಕ್ ಡೌನ್ ಪ್ರಾರಂಭದಿಂದಲೂ ನಮ್ಮ ಸಂಘಟನೆಯ ಸ್ವಯಂ ಸೇವಕರು ರಂಗಕ್ಕಿಳಿದ್ದಿದ್ದರು. ಅವರು ಲಾಕ್ ಡೌನ್ ನಿಂದ ಅತಂತ್ರರಾಗಿದ್ದ ಜನರಿಗೆ ನೆರವಾಗಲು, ಕೋವಿಡ್ ರೋಗಿಗಳಿಗೆ ವೈದ್ಯಕೀಯ ನೆರವು ನೀಡಲು ಮತ್ತು ಮೃತದೇಹಗಳಿಗೆ ಘನತೆಯ ಅಂತಿಮ ಸಂಸ್ಕಾರ ಖಾತರಿಪಡಿಸುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ” ಎಂದರು.

- Advertisement -

ಇದೀಗ ದೇಶದ ಪರಿಸ್ಥಿತಿಯು ದುರಂತಮಯವಾಗುತ್ತಿದೆ. ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ, ರೋಗಿಗಳ ಅಗತ್ಯಗಳನ್ನು ಪೂರೈಸಲು ಆರೋಗ್ಯ ಕಾರ್ಯಕರ್ತರು ಹೆಣಗಾಡುತ್ತಿದ್ದಾರೆ ಮತ್ತು ಮೃತದೇಹಗಳನ್ನು ತೆರೆದ ಮೈದಾನದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುತ್ತಿದೆ ಎಂಬ ದೇಶದ ವಿವಿಧ ಕಡೆಗಳಿಂದ ಬರುತ್ತಿರುವ ವರದಿಗಳು ದುಃಖಕರ ಎಂದು ಪಾಪ್ಯುಲರ್ ಫ್ರಂಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಇಡೀ ಹೋರಾಟದಲ್ಲಿ ಸಂಘಟನೆಯು ದೇಶದ ಜೊತೆಗೆ ನಿಲ್ಲಲಿದೆ. ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಮತ್ತು ಆಡಳಿತದ ವರ್ಗದ ನಿರ್ದೇಶನಗಳಿಗೆ ಪೂರ್ಣ ಸಹಕಾರ ನೀಡಬೇಕೆಂದು ಪಾಪ್ಯುಲರ್ ಫ್ರಂಟ್ ನಾಗರಿಕರೊಂದಿಗೆ ಮನವಿ ಮಾಡಿದೆ.

Join Whatsapp