ಹೊಸದಿಲ್ಲಿ : ರಾಷ್ಟ್ರ ರಾಜಧಾನಿಯಲ್ಲಿ ನಿತ್ಯ 25 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೊರೋನಾ ನಿಯಂತ್ರಣ ಕಳೆದುಕೊಂಡಿದ್ದು, 6 ದಿನಗಳ ಕಾಲ ಸಂಪೂರ್ಣ ಲಾಕ್ಡೌನ್ ವಿಧಿಸಿರುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗೆ ಅವಕಾಶವಿದ್ದರೂ 50 ಜನರಿಗೆ ಮಾತ್ರ ಭಾಗವಿಸಲು ಅವಕಾಶವಿರುತ್ತದೆ. ಇನ್ನುಳಿದಂತೆ ತುರ್ತು ಸೇವೆಗಳು ಲಭ್ಯವಿರಲಿವೆ.
ದೆಹಲಿಯಲ್ಲಿ ಖಾಸಗಿ ಕಚೇರಿಗಳ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವಂತೆ ತಿಳಿಸಲಾಗಿದೆ. ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಲಿವೆ. ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 25,462 ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಅನಿವಾರ್ಯ ಕಾರಣಗಳಿಂದ ಲಾಕ್ಡೌನ್ ವಿಧಿಸಲಾಗಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ವಲಸೆ ಕಾರ್ಮಿಕರ ಕುರಿತು ಚರ್ಚೆ ನಡೆಸಲಾಗಿದ್ದು, ಅವರಿಗೆ ಯಾವುದೇ ಕೆಟ್ಟ ಅನುಭವವಾಗದಂತೆ ನೋಡಿಕೊಳ್ಳಲಾಗುತ್ತದೆ. ದೆಹಲಿ ಸರ್ಕಾರ ಈ ಹಿಂದೆ ಘೋಷಿಸಿದ್ದ ವೀಕೆಂಡ್ ಕರ್ಫ್ಯೂ ಸೋಮವಾರ ಬೆಳಗ್ಗೆ 5 ಗಂಟೆಗೆ ಮುಕ್ತಾಯಗೊಂಡಿದೆ.
ಈ ಆರು ದಿನಗಳಲ್ಲಿ ಹೆಚ್ಚು ಹಾಸಿಗೆಗಳ ವ್ಯವಸ್ಥೆ ಮಾಡಲಾಗುತ್ತದೆ, ಈ ಲಾಕ್ಡೌನ್ ಸಂದರ್ಭವನ್ನು ಆಮ್ಲಜನಕ ಶೇಖರಣೆ, ಔಷಧಗಳ ಶೇಖರಣೆಗೆ ಬಳಕೆ ಮಾಡಲಾಗುತ್ತದೆ. ಪ್ರತಿಯೊಬ್ಬರೂ ಲಾಕ್ಡೌನ್ ನಿಯಮ ಪಾಲಿಸುವಂತೆ ಕೇಜ್ರಿವಾಲ್ ಮನವಿ ಮಾಡಿದ್ದಾರೆ.