ಬೆಂಗಳೂರು: ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿರುವ ಪ್ರಕರಣವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ವೀಡಿಯೋ, ಸಿಡಿ, ಆಡಿಯೋ ಧಾರವಾಹಿಯಂತೆ ಬಿಡುಗಡೆಯಾಗುತ್ತಿದೆ ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ಸಂತ್ರಸ್ತೆ ಯುವತಿ ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿ ದುರ್ಬಳಕೆ ಮಾಡಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಪ್ರಕರಣ ದಾಖಲಾಗಿದೆ.
ಬಸವರಾಜ್ ಬೊಮ್ಮಾಯಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ವೀಡಿಯೋ, ಸಿಡಿ, ಆಡಿಯೋ ಧಾರವಾಹಿಯಂತೆ ಬಿಡುಗಡೆಯಾಗುತ್ತಿದೆ. ಈ ಮೂರನ್ನು ಇಟ್ಟುಕೊಂಡು SIT ಕೂಲಂಕುಷವಾಗಿ ತನಿಖೆ ಮಾಡುತ್ತಿದೆ. ಪ್ರಕರಣದ ಹಿಂದಿರುವ ಸತ್ಯಾಸತ್ಯತೆ ತಿಳಿದುಕೊಂಡು ತನಿಖೆಯನ್ನು ಮುಂದುವರಿಸುತ್ತಿದೆ. ಯಾವುದೇ ರೀತಿಯ ಒತ್ತಡ ಮತ್ತು ಪ್ರಭಾವಕ್ಕೆ ಒಳಗಾಗುವುದಿಲ್ಲ ಮತ್ತು ಸತ್ಯದ ವರದಿಯನ್ನು ಕಲೆ ಹಾಕಲಾಗುತ್ತಿದೆ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.