ದ.ಕ. ಜಿಲ್ಲೆಯಲ್ಲಿ ಕೋಮು ಗಲಭೆಗೆ ಸಂಘಪರಿವಾರ ಸಂಚು ನಡೆಸುತ್ತಿದೆ : ಪಾಪ್ಯುಲರ್ ಫ್ರಂಟ್

Prasthutha|

ಮಂಗಳೂರು : ಪ್ರಚೋದನಾಕಾರಿ ಭಾಷಣ, ಕಲ್ಪಿತ ಸುಳ್ಳು ಅಪಪ್ರಚಾರಗಳು, ಹಲ್ಲೆ ಘಟನೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಿರಂತರವಾಗಿ ನಡೆಯುತ್ತಿವೆ. ಸದ್ಯ ಶಾಂತಿಯುತವಾಗಿರುವ ಜಿಲ್ಲೆಯನ್ನು ಸಂಘಪರಿವಾರ, ಅಶಾಂತಿಗೆ ತಳ್ಳಲು ಪ್ರಯತ್ನಿಸುತ್ತಿದೆ. ಇದನ್ನು ಪೋಲಿಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಜಿಲ್ಲೆಯ ಶಾಂತಿಯನ್ನು ಕದಡಲು ಪ್ರಯತ್ನಿಸುವ ಸಂಘಪರಿವಾರದ ನಾಯಕರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಂಡು ಜಿಲ್ಲೆಯ ಶಾಂತಿಯನ್ನು ಕಾಪಾಡಬೇಕು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ.ಕ. ಜಿಲ್ಲೆ ಒತ್ತಾಯಿಸಿದೆ.

- Advertisement -

ಪುತ್ತೂರಿನಲ್ಲಿ ಸಂಘಪರಿವಾರದ ಮುಖಂಡ ಜಗದೀಶ್ ಕಾರಂತ, ಇಸ್ಲಾಮ್ ಹಾಗೂ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಇದುವರೆಗೆ ಕ್ರಮಕೈಗೊಂಡಿಲ್ಲ. ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಮಸೀದಿಯೊಂದರ ಇಮಾಮ್ ಮೌಲಾನಾ ಅಬ್ದುಲ್ ನಾಸಿರ್ ದಾರಿಮಿ ಎಂಬವರು ಮನೆಯಿಂದ ಪ್ರಾರ್ಥನೆಗಾಗಿ ಮಸೀದಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ದಾರಿ ಮಧ್ಯೆ ಅವರನ್ನು ತಡೆದು ಧರ್ಮ, ವೇಷಭೂಷಣವನ್ನು ನಿಂದಿಸಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಕೊಕ್ಕಡದಲ್ಲಿ ಮಸೀದಿ ಉದ್ಘಾಟನಾ ಸಮಾರಂಭಕ್ಕೆ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದನ್ನು ಮುಂದಿಟ್ಟು ಕೋಮುದ್ವೇಷ ಹರಡಲು ಪ್ರಯತ್ನಿಸಲಾಗುತ್ತಿದೆ. ವಂಚನೆಯ ಮೂಲಕ ಮಂಗಳೂರಿನ ಉದ್ಯಮಿ 62 ವರ್ಷದ ವೃದ್ಧ ಗಂಗಾಧರ್ ಎಂಬಾತ ವಿಧವೆ ಮುಸ್ಲಿಮ್ ಮಹಿಳೆಯೊಬ್ಬರನ್ನು ಮದುವೆಯಾಗಿದ್ದನ್ನು ಲವ್ ಜಿಹಾದ್ ಎಂದು ಸಂಘಪರಿವಾರ ಆರೋಪ ಮಾಡಿತ್ತು. ಆದರೆ ವಾಸ್ತವ ಬೆಳಕಿಗೆ ಬಂದಾಗ ಸಂಘಪರಿವಾರ ಮುಖಭಂಗಕ್ಕೀಡಾಗಿದೆ. ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ಖಾಸಗಿ ಕಾಲೇಜಿನ ವಿದ್ಯಾರ್ಥಿ ಮುಹಮ್ಮದ್ ಸಫ್ವಾನ್ ಎಂಬವರನ್ನು ಅಡ್ಡಗಟ್ಟಿ ಆವಾಚ್ಯ ಶಬ್ದದಿಂದ ನಿಂದಿಸಿ  ಹಲ್ಲೆ ನಡೆಸಿ  ಜೀವ ಬೆದರಿಕೆ ಹಾಕಲಾಗಿದೆ. ಇಂತಹ ಹಲವು ಘಟನೆಗಳು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿದ್ದು, ಈ ಎಲ್ಲಾ ಘಟನೆಗಳು ಸಂಘಪರಿವಾರ ಜಿಲ್ಲೆಯಲ್ಲಿ ಕೋಮುಗಲಭೆಗೆ ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಆದ್ದರಿಂದ ಜಿಲ್ಲೆಯ ಪ್ರಜ್ಞಾವಂತ ಜನರು ಇಂತಹ ಸುಳ್ಳು ಪ್ರಚಾರಗಳಿಗೆ ಬಲಿಯಾಗದೆ ಜಾಗೃತಿಗೊಳ್ಳಬೇಕು. ಪೊಲೀಸ್ ಇಲಾಖೆ ಯಾರ ಒತ್ತಡಕ್ಕೂ ಮಣಿಯದೆ ಕಾನೂನು ಪ್ರಕಾರ ಕಾರ್ಯನಿರ್ವಹಿಸಬೇಕು. ಪ್ರಚೋದನಾಕಾರಿ ಭಾಷಣ ಮಾಡುವ ಸಂಘಪರಿವಾರದ ಮುಖಂಡರ ವಿರುದ್ಧ ಸ್ವಯಂ ಪ್ರೇರಿತ ಕೇಸು ದಾಖಲಿಸಿ ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಅನಾಹುತಕ್ಕೆ ತಡೆ ನೀಡಬೇಕು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ.ಕ. ಜಿಲ್ಲಾಧ್ಯಕ್ಷ ಇಜಾಝ್ ಅಹಮದ್ ಆಗ್ರಹಿಸಿದ್ದಾರೆ.



Join Whatsapp