ಮೋದಿ ಬಾಂಗ್ಲಾ ಭೇಟಿ ವಿರುದ್ಧ ಭುಗಿಲೆದ್ದ ಪ್ರತಿಭಟನೆ

Prasthutha|

ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾ ದೇಶದ 50 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಬಾಂಗ್ಲಾ ದೇಶಕ್ಕೆ ತೆರಳಿದ್ದಾರೆ. ನರೇಂದ್ರ ಮೋದಿ ಸುವರ್ಣ ಮಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಮೋದಿಯವರ ಭೇಟಿಯನ್ನು ವಿರೋಧಿಸಿ ಬಾಂಗ್ಲಾದೇಶದಲ್ಲಿ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ.

- Advertisement -

ಬಾಂಗ್ಲಾ ದೇಶದ ಸ್ಥಾಪಕ, ಹಾಲಿ ಪ್ರಧಾನಿ ಶೇಖ್ ಹಸೀನಾ ಅವರ ತಂದೆ ’ಬಂಗಬಂಧು’ ಶೇಖ್ ಮುಜಿಬುರ್ ರಹಮಾನ್ ಅವರ ಜನ್ಮ ಶತಮಾನೋತ್ಸವದಲ್ಲಿಯೂ ಭಾಗವಹಿಸಲಿರುವ ಮೋದಿಯವರನ್ನು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಸ್ವಾಗತಿಸಿದ್ದಾರೆ.

ಢಾಕಾಗೆ ಬಂದಿಳಿದ ನರೇಂದ್ರ ಮೋದಿಯವರು ಯುದ್ಧ ಸ್ಮಾರಕಕ್ಕೆ ಗೌರವ ಸಲ್ಲಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಹೋಟೆಲೊಂದರಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ್ದಾರೆ.

- Advertisement -

ಮೋದಿಯವರ ಭೇಟಿಯನ್ನು ತೀವ್ರವಾಗಿ ವಿರೋಧಿಸುತ್ತಿರುವ ಪ್ರತಿಭಟನಾಕಾರರು ಢಾಕಾದ ಮುಖ್ಯ ಮಸೀದಿಯ ಹತ್ತಿರ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದಾರೆ.  ಪೊಲೀಸರು ಅಶ್ರುವಾಯು ಮತ್ತು ರಬ್ಬರ್ ಗುಂಡುಗಳನ್ನು ಬಳಸಿ ಸಾವಿರಾರು ಮಂದಿ ಪ್ರತಿಭಟನಾಕಾರರನ್ನು ಚದುರಿಸುವ ಪ್ರಯತ್ನ ನಡೆಸಿದ್ದಾರೆ. ವಿದ್ಯಾರ್ಥಿಗಳು ಮತ್ತು ಯುವಕರು ಮೋದಿಯವರಿಗೆ ಅಗೌರವ ತೋರುವ ಸಂಕೇತವಾಗಿ ಬೂಟುಗಳನ್ನು ಬೀಸಿ ‘ಮೋದಿ ನಾಟ್ ವೆಲ್ಕಂ’ ಎಂದು ಘೋಷಣೆ ಕೂಗಿದ್ದಾರೆ.

ನರೇಂದ್ರ ಮೋದಿ 2002 ರ ಗುಜರಾತ್ ಗಲಭೆಯನ್ನು ಪ್ರಚೋದಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಘಟನೆಯಲ್ಲಿ ಹಲವಾರು ಪೊಲೀಸರು ಗಾಯಗೊಂಡಿದ್ದು,  33 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು 40 ಪ್ರತಿಭಟನಾಕಾರರು ಗಾಯಗೊಂಡರು. ಗಾಯಗೊಂಡ 18 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ನರೇಂದ್ರ ಮೋದಿ ಸರ್ಕಾರವು ಭಾರತದಲ್ಲಿ ಹಲವಾರು ಕಾನೂನುಗಳನ್ನು ಜಾರಿಗೆ ತಂದು ಮುಸ್ಲಿಮರನ್ನು ಎರಡನೇ ದರ್ಜೆಯ ಪ್ರಜೆಯನ್ನಾಗಿ ಮಾಡುತ್ತದೆ. ಅಂತಹಾ ನಾಯಕನನ್ನು 50 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಲು ಅನುಮತಿಸಬಾರದು” ಎಂದು ಇಸ್ಲಾಮಿಸ್ಟ್ ರಾಜಕೀಯ ಸಂಘಟನೆಯಾದ ಹೆಫಜತ್-ಎ-ಇಸ್ಲಾಂನ ಪ್ರಧಾನ ಕಾರ್ಯದರ್ಶಿ ಮೌಲಾನಾ ಮಾಮುನುಲ್ ಹಕ್ ಹೇಳಿದ್ದಾರೆ.

ಮೋದಿಯವರನ್ನು ಆಹ್ವಾನಿಸಿದ್ದ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp