►‘ಪ್ರಸ್ತುತ’ ಬಗ್ಗೆ ನಿರಂತರ ಮೆಚ್ಚುಗೆಯ ಮಾತುಗಳು
ದುಬೈ : ಯುಎಇ ರಾಸ್ ಅಲ್ ಖೈಮಾದ ಸ್ಕಾಲರ್ಸ್ ಇಂಡಿಯನ್ ಹೈಸ್ಕೂಲ್ ಇದರ ಪ್ರಾಂಶುಪಾಲರಾಗಿದ್ದ ಪ್ರೊ.ಅಬೂಬಕರ್ ತುಂಬೆ ಇಂದು ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ. ಮಂಗಳವಾರ ಮುಂಜಾನೆ ತನ್ನ ಸ್ವಗೃಹದಲ್ಲಿ ಇಹಲೋಕ ತ್ಯಜಿಸಿರುವ ಅವರಿಗೆ 59 ವರ್ಷ ವಯಸ್ಸಾಗಿತ್ತು.
ಬದ್ರಿಯಾ ಪ್ರಥಮ ದರ್ಜೆ ಕಾಲೇಜು ಕಂದಕ ಮಂಗಳೂರಿನಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶಿಕ್ಷಕರಾಗಿ ತನ್ನ ವೃತ್ತಿ ಜೀವನ ಆರಂಭಿಸಿದ್ದ ಅಬೂಬಕ್ಕರ್ ಅವರು, ನಂತರ ತುಂಬೆಯ ಬಿ ಎ ಗ್ರೂಪಿನಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದರು. ಆ ಬಳಿಕ ಸ್ಥಳಿಯವಾಗಿ ಕೆಲವೊಂದು ಶಾಲೆಗಳಲ್ಲಿ ವೃತ್ತಿ ಜೀವನ ನಿರ್ವಹಿಸಿದ್ದ ಅಬೂಬಕ್ಕರ್, ನಂತರ ನಿಧನದ ವರೆಗೂ ರಾಸ್ ಅಲ್ ಖೈಮಾದಲ್ಲಿ ತನ್ನ ವೃತ್ತಿ ಜೀವನವನ್ನು ಮುಂದುವರಿಸಿದ್ದರು. ಸಾಮಾಜಿಕ ಕಾಳಜಿಯನ್ನು ಹೊಂದಿದ್ದ ಅಬೂಬಕ್ಕರ್, ಓರ್ವ ಅಪರೂಪದ ವ್ಯಕ್ತಿ ಮತ್ತು ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ.
ಶಿಕ್ಷಣದ ಬಗ್ಗೆ ಅಪಾರ ಪಾಂಡಿತ್ಯ ಹೊಂದಿದ್ದ ಅಬೂಬಕ್ಕರ್ ಅವರ ಶಿಕ್ಷಣ ಕ್ಷೇತ್ರದಲ್ಲಿನ ಕೊಡುಗೆಗಾಗಿ ಬ್ಯಾರೀಸ್ ವೆಲ್ಫೇರ್ ಫೋರಂನ ದಶಮಾನೋತ್ಸವ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಿತ್ತು. ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧು ಬಳಗ ಮತ್ತು ಶಿಷ್ಯ ವೃಂದವನ್ನು ಅಗಲಿದ್ದಾರೆ.
‘ಪ್ರಸ್ತುತ’ ದ ಬಗ್ಗೆ ನಿರಂತರ ಮೆಚ್ಚುಗೆಯ ಮಾತುಗಳು
ಪ್ರೊಫೆಸರ್ ಅಬೂಬಕ್ಕರ್ ಅವರು ‘ಪ್ರಸ್ತುತ’ದ ಕಾರ್ಯ ನಿರ್ವಹಣೆಯ ಬಗ್ಗೆ ನಿರಂತರವಾಗಿ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದರು. ಯೂಟ್ಯೂಬ್ ಚಾನೆಲ್ ನ ಪ್ರತಿ ಕಾರ್ಯಕ್ರಮಗಳ ಬಗ್ಗೆ ಧನಾತ್ಮಕವಾಗಿ ತನ್ನ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದರು.