ಕಮಲ್ ಹಾಸನ್ ಸಂಚರಿಸುತ್ತಿದ್ದ ಚುನಾವಣಾ ಪ್ರಚಾರ ವಾಹನವನ್ನು ತಡೆದು ದಿಢೀರ್ ತಪಾಸಣೆ ನಡೆಸಿದ ಚುನಾವಣಾ ಆಯೋಗ
Prasthutha: March 23, 2021

ನಟ ಮತ್ತು ಮಕ್ಕಳ್ ನೀದಿ ಮಯ್ಯಂ ಪಕ್ಷದ ನಾಯಕ ಕಮಲ್ ಹಾಸನ್ ಅವರು ಸಂಚರಿಸುತ್ತಿದ್ದ ಕಾರವಾನ್ ಅನ್ನು ತಂಜಾವೂರು ಗಡಿಯಲ್ಲಿ ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ತಡೆದು ದಿಢೀರ್ ತಪಾಸಣೆ ನಡೆಸಿದೆ.
ತಿರುಚಿರಾಪಳ್ಳಿಯ ಸಾರ್ವಜನಿಕ ಸಭೆಗೆ ಹೋಗುವ ದಾರಿಯಲ್ಲಿ ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ವಾಹನವನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದೆ. ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ಕಮಲ್ ಹಾಸನ್ ಅವರ ಮನೆಯ ಮೇಲೆ ದಾಳಿ ನಡೆಸಿತ್ತು. “ಕೇಂದ್ರ ಏಜೆನ್ಸಿಗಳ ಈ ದಾಳಿಯು ಬಿಜೆಪಿ ನಡೆಸುವ ಬೆದರಿಕೆ ರಾಜಕೀಯವಾಗಿದೆ. ನಾನು ಇಂತಹಾ ದಾಳಿಗಳಿಗೆ ಹೆದರುವುದಿಲ್ಲ. ನನ್ನ ಮನೆಯಲ್ಲಿ ಅವರಿಗೆ ಏನೂ ಸಿಗಲು ಸಾಧ್ಯವಿಲ್ಲ” ಎಂದು ಕಮಲ್ ಹಾಸನ್ ಹೇಳಿದ್ದರು.
ಈ ಚುನಾವಣೆ ಮೂಲಕ ಕಮಲ್ ಹಾಸನ್ ತಮಿಳುನಾಡು ವಿಧಾನಸಭೆಗೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಕಮಲ್ ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಈ ಕ್ಷೇತ್ರದಲ್ಲಿ ಕೋಮು ಧ್ರುವೀಕರಣ ನಡೆಯುತ್ತಿದೆ. ಆದ್ದರಿಂದ ಇದರ ವಿರುದ್ಧ ಹೋರಾಡಬೇಕು ಎಂದು ಕಮಲ್ ಹಾಸನ್ ಈ ಹಿಂದೆ ಹೇಳಿದ್ದರು. ಮ್ಯಾಂಚೆಸ್ಟರ್ ಆಫ್ ಸೌತ್ ಎಂದು ಕರೆಯಲ್ಪಡುವ ನಗರವು ತನ್ನ ಹೆಮ್ಮೆ ಮತ್ತು ವೈಭವವನ್ನು ಕಳೆದುಕೊಳ್ಳದಂತೆ ನೋಡಿಕೊಂಡು ಕೆಲಸ ಮಾಡುವುದಾಗಿ ಕಮಲ್ ಹಾಸನ್ ಭರವಸೆ ನೀಡಿದ್ದರು.
