ಮಂಗಳೂರು : ಬ್ಯಾರಿ ಸಂಗೀತ ಕಲಾವಿದರ ಒಕ್ಕೂಟ ದ.ಕ. ಮತ್ತು ಉಡುಪಿ ಜಿಲ್ಲೆ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಜಂಟಿ ಆಶ್ರಯದಲ್ಲಿ ತೇಜಸ್ವಿನಿ ಲಯನ್ಸ್ ಬ್ಲಡ್ ಬ್ಯಾಂಕ್ ಮಂಗಳೂರು ಇದರ ಸಹಯೋಗದಲ್ಲಿ ಇಂದು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಕಂಕನಾಡಿ ಸಭಾಂಗಣದಲ್ಲಿ ಮರ್ಹೂಮ್ ಶರೀಫ್ ಬೆಳ್ಳಾರೆ ವೇದಿಕೆಯಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಸಭಾಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ರಾಜ್ಯ ಆಹಾರ ಆಯೋಗದ ಮಾಜಿ ಸದಸ್ಯ ಬಿ.ಎ.ಮಹಮ್ಮದಾಲಿಯವರು ಮಾತಾಡುತ್ತಾ, ‘ಸಂಗೀತ ಕಲಾವಿದರು ತಮ್ಮ ಕಾಯಕದ ಮೂಲಕ ಇನ್ನೊಬ್ಬರಿಗೆ ಖುಷಿಯನ್ನು ಕೊಟ್ಟು ಇನ್ನೊಬ್ಬರ ಸಂತೋಷದಲ್ಲಿ ತಾವು ಸುಖವನ್ನು ಕಾಣುವ ಹವ್ಯಾಸವನ್ನು ಬೆಳೆಸಿಕೊಂಡವರು. ಇದೀಗ ರಕ್ತದಾನದ ಮೂಲಕ ತಮ್ಮ ಜೀವನವೇ ಇಂತಹ ತ್ಯಾಗಗಳಿಗೆ ಮೀಸಲಿರುವಂತಹದ್ದು ಎಂಬುದನ್ನು ಸಾಬೀತು ಪಡಿಸಿದ್ದಾರೆ’ ಎಂದು ಹೇಳಿ ಕಲಾವಿದರನ್ನು ಅಭಿನಂದಿಸಿದರು.
ಕೊರೋನಾದ ಈ ಸಂದರ್ಭದಲ್ಲಿ ನಿರ್ಭೀತಿಯಿಂದ ಅನಾರೋಗ್ಯ ಪೀಡಿತರಿಗೆ ಚಿಕಿತ್ಸೆ ನೀಡುತ್ತಾ ಮಾನವೀಯತೆ ಮೆರೆದ ಡಾ. ಇ.ಕೆ. ಸಿದ್ದೀಕ್ ಅಡ್ಡೂರು ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ತೇಜಸ್ವಿನಿ ಲಯನ್ಸ್ ಬ್ಲಡ್ ಬ್ಯಾಂಕ್ ಮಂಗಳೂರು ಇದರ ಮುಖ್ಯಸ್ಥ ಡಾ. ವಾಸುದೇವ್, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಮುಖ್ಯಸ್ಥ ರಿಯಾಝ್ ಎ. ವನ್, ಆಂಬುಲೆನ್ಸ್ ಚಾಲಕ ಹನೀಫ್, ಹೋಪ್ ಫೌಂಡೇಶನ್ ನ ಸೈಫ್ ಸುಲ್ತಾನ್, ಶರೀಫ್ ವಲಾಲ್, ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಬ್ಯಾರಿ ಸಂಗೀತ ಕಲಾವಿದರ ಒಕ್ಕೂಟದ ಗೌರವಾಧ್ಯಕ್ಷ ಹುಸೈನ್ ಕಾಟಿಪಳ್ಳ ಪ್ರಸ್ತಾವನೆ ಗೈದರು. ಅಧ್ಯಕ್ಷ ಶಮೀರ್ ಮುಲ್ಕಿ ಸ್ವಾಗತಿಸಿದರು. ಉಪಾಧ್ಯಕ್ಷರುಗಳಾದ ಇರ್ಫಾನ್ ಕುಂದಾಪುರ, ಸಮದ್ ಗಡಿಯಾರ್, ಗೌರವ ಸಲಹೆಗಾರರಾದ ಬಶೀರ್ ಅಹ್ಮದ್ ಕಿನ್ಯ, ರಶೀದ್ ನಂದಾವರ, ಸಂಚಾಲಕ ಅಶ್ರಫ್ ಅಪೋಲೊ, ಪ್ರಧಾನ ಕಾರ್ಯದರ್ಶಿ ಸರ್ಪ್ರಾಝ್ ಮಂಗಳೂರು, ರಾಝ್ ಕಲಾಯಿ ಮುಂತಾದವರು ಉಪಸ್ಥಿತರಿದ್ದರು.