ಪಾಕಿಸ್ತಾನ: ಒಟ್ಟು 21 ರಾಷ್ಟ್ರೀಯ, ಪ್ರಾಂತ್ಯವಾರು ಕ್ಷೇತ್ರಗಳಿಗೆ ಪಾಕಿಸ್ತಾನದಲ್ಲಿ ಭಾನುವಾರ ಬಿಗಿ ಭದ್ರತೆಯಲ್ಲಿ ಉಪ ಚುನಾವಣೆ ನಡೆದಿದೆ.ಅಲ್ಲಲ್ಲಿ ಹಿಂಸಾಚಾರ ಘಟನೆಗಳು ನಡೆದಿದ್ದು, ಪಂಜಾಬ್ ಪ್ರಾಂತ್ಯದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಪಂಜಾಬ್, ಬಲೂಚಿಸ್ತಾನದ ಕೆಲವೆಡೆ ಮುಂಜಾಗ್ರತಾ ಕ್ರಮವಾಗಿ ಇಂಟರ್‌ನೆಟ್ ಸಂಪರ್ಕ ಸ್ಥಗಿತಗೊಳಿಸಲಾಗಿತ್ತು. ಬಿಗಿ ಬಂದೋಬಸ್ತ್ ನಡುವೆಯೂ ನರೋವಲ್, ಶೇಖ್‌ಪುರ, ರಹೀಂ ಯಾರ್ ಖಾನ್‌ನ ವಿವಿಧೆಡೆ ಘರ್ಷಣೆಗಳು ನಡೆದಿವೆ ಎಂದು ವರದಿಯಾಗಿದೆ.
ಫೆಬ್ರುವರಿ 8ರಂದು ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆದಿತ್ತು. ಆಗ, ಒಂದು ರಾಷ್ಟ್ರೀಯ ಮತ್ತು ಎರಡು ಪ್ರಾಂತ್ಯವಾರು ಕ್ಷೇತ್ರಗಳಲ್ಲಿ ಚುನಾವಣೆ ರದ್ದುಪಡಿಸಲಾಗಿತ್ತು. ರಾಷ್ಟ್ರೀಯ ಮತ್ತು ಪ್ರಾಂತ್ಯ ಕ್ಷೇತ್ರಗಳಲ್ಲಿ ಜಯಗಳಿಸಿದ್ದ ಕೆಲವರು ಒಂದು ಕ್ಷೇತ್ರ ಉಳಿಸಿಕೊಂಡು ಇನ್ನೊಂದಕ್ಕೆ ರಾಜೀನಾಮೆ ನೀಡಿದ್ದರು. ಒಟ್ಟು 21 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ.