ಸುಬ್ರಮಣ್ಯ: ದೇವಸ್ಥಾನಗಳ ಬಳಿ ಹಿಂದುಯೇತರ ಸಮುದಾಯಗಳ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದು ಎಂಬ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಬಳಿ ಹಿಂದುಯೇತರ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಎಂದು ಹಿಂದುತ್ವ ಸಂಘಟನೆಗಳು ಒತ್ತಾಯಿಸಿವೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿಸೆಂಬರ್ 18ರಂದು ಚಂಪಾ ಷಷ್ಠಿ ನಡೆಯಲಿದೆ. ಈ ವೇಳೆ, ಹಿಂದುಯೇತರ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದು ಎಂದು ದೇವಳದ ಕಾರ್ಯ ನಿರ್ವಹಣಾ ಅಧಿಕಾರಿಗೆ ಸಂಘಟನೆಗಳು ಮನವಿ ಸಲ್ಲಿಸಿವೆ. ಅಲ್ಲದೆ, ಹಿಂದು ಹಿತರಕ್ಷಣಾ ವೇದಿಕೆ, ಸುಬ್ರಹ್ಮಣ್ಯ ಹೆಸರಿನಲ್ಲಿ ಕುಮಾರಧಾರ ಬಳಿ ಬ್ಯಾನರ್ಅನ್ನೂ ಕೂಡ ಹಾಕಲಾಗಿದೆ. “ಚಂಪಾ ಷಷ್ಠಿ ಸಂದರ್ಭದಲ್ಲಿ ನಡೆಯುವ ಜಾತ್ರೆಯಲ್ಲಿ ಅನ್ಯಮತೀಯರ ವ್ಯಾಪಾರ ನಿಷೇಧಿಸಲಾಗಿದೆ” ಎಂದು ಬ್ಯಾನರ್ನಲ್ಲಿ ಬರೆಯಲಾಗಿದೆ.