ಡಿಕೆ ಶಿವಕುಮಾರ್ ಸತ್ಯಹರಿಶ್ಚಂದ್ರರಾಗಿದ್ದರೆ ಸಿಬಿಐ ತನಿಖೆಗೆ ಭಯವೇಕೆ: ಆರ್.ಅಶೋಕ

Prasthutha|

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಿಜವಾಗಿಯೂ ಸತ್ಯಹರಿಶ್ಚಂದ್ರರಾಗಿದ್ದರೆ ಸಿಬಿಐ ತನಿಖೆ ಬಗ್ಗೆ ಏಕೆ ಭಯಪಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಪ್ರಶ್ನಿಸಿದ್ದಾರೆ.

- Advertisement -


ಈ ಬಗ್ಗೆ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮೊದಲ ಅವಧಿಯಲ್ಲಿ ಲೋಕಾಯುಕ್ತಕ್ಕೆ ತಿಲಾಂಜಲಿ ಇಟ್ಟು ಭ್ರಷ್ಟರನ್ನು ರಕ್ಷಣೆ ಮಾಡಿದ್ದರು. ಈಗ ಎರಡನೇ ಅವಧಿಯಲ್ಲಿ ತಮ್ಮ ಕುರ್ಚಿ ಉಳಿಸಿಕೊಳ್ಳಲು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸಿಬಿಐ ತನಿಖೆಯಿಂದ ಪಾರು ಮಾಡಲು ಹೊರಟಿದ್ದಾರೆ’ ಎಂದು ಆರೋಪಿಸಿದ್ದಾರೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದ ಕುರಿತು ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆಯುವ ಮೂಲಕ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ರಕ್ಷಣೆ ನೀಡಲು ಯತ್ನಿಸುತ್ತಿದೆ ಎಂದು ವಿರೋಧ ಪಕ್ಷಗಳು ಮುಗಿಬಿದ್ದಿವೆ.


ಶಿವಕುಮಾರ್ ಮೇಲೆ ಸಿಬಿಐ ತನಿಖೆಗೆ 2019ರ ಸೆಪ್ಟೆಂಬರ್ 25ರಂದು ನೀಡಿದ್ದ ಅನುಮತಿಯನ್ನು ಹಿಂಪಡೆಯಲು ಗುರುವಾರ ನಡೆದ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಸರ್ಕಾರದ ನಡೆಯನ್ನು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ತೀವ್ರವಾಗಿ ವಿರೋಧಿಸಿವೆ.



Join Whatsapp