ಮೈಸೂರು: ಮೈಸೂರು ದಸರಾದ ಜಂಬೂ ಸವಾರಿಯ ಮೆರವಣಿಗೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಸ್ತಬ್ಧಚಿತ್ರ ನೋಡುಗರ ಗಮನ ಸೆಳೆದಿದೆ. ಪ್ರತಿ ಜಿಲ್ಲೆಯಿಂದಲೂ ಒಂದು ಸ್ತಬ್ಧಚಿತ್ರವು ಮೆರವಣಿಯಲ್ಲಿ ಇದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಧಾರ್ಮಿಕ ಕ್ಷೇತ್ರ ಹಾಗೂ ಪ್ರಸಿದ್ಧ ಪ್ರವಾಸಿ ತಾಣಗಳಾದ ಕೈವಾರ, ಕೈಲಾಸಗಿರಿ ಹಾಗೂ ಮುರಗಮಲ್ಲ ದರ್ಗಾ ಕ್ಷೇತ್ರಗಳನ್ನು ಒಳಗೊಂಡು ಸ್ತಬ್ಧಚಿತ್ರವನ್ನು ರೂಪಿಸಲಾಗಿತ್ತು. ಆಕರ್ಷಕವಾದ ಸ್ತಬ್ಧಚಿತ್ರವನ್ನು ಜಿಲ್ಲಾ ಪಂಚಾಯಿತಿ ಮಾಡಿಸಿಕೊಂಡಿತ್ತು. ಇದು ಕನ್ನಡ ನಾಡಿನ ಭಾವೈಕ್ಯದ ಸಂದೇಶ ಸಾರಿದ್ದು, ರಾಜ್ಯ, ದೇಶ, ವಿದೇಶಗಳ ಜನರು ಜಂಬೂ ಸವಾರಿಯ ಸ್ತಬ್ಧಚಿತ್ರಗಳ ಮೆರವಣಿಗೆಯನ್ನು ಕಣ್ತುಂಬಿಕೊಂಡಿದ್ದಾರೆ.
ಈ ಹಿಂದಿನಿಂದಲೂ ಚಿಕ್ಕಬಳ್ಳಾಪುರ ಜಿಲ್ಲೆಯ ಸ್ತಬ್ಧಚಿತ್ರಗಳು ಮೈಸೂರು ದಸರಾದ ಜಂಬೂ ಸವಾರಿ ಮೆರವಣಿಗೆಯಲ್ಲಿ ಗಮನ ಸೆಳೆಯುತ್ತಿವೆ. ದಕ್ಷಿಣ ಭಾರತ ಜಲಿಯಾನ್ ವಾಲಾಬಾಗ್ ಎಂದೇ ಖ್ಯಾತಿ ಪಡೆದಿರುವ ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥದ ಹುತಾತ್ಮರ ವೀರಸೌಧ, ವಿದುರಾಶ್ವತ್ಥ ದೇಗುಲದ ಸ್ತಬ್ಧಚಿತ್ರ, ಗ್ರೀನ್ ನಂದಿ, ಕ್ಲೀನ್ ನಂದಿ ಎಂಬ ಸ್ತಬ್ದಚಿತ್ರ, ಬಾಗೇಪಲ್ಲಿ ಗುಮ್ಮನಾಯಕನಪಾಳ್ಯ, ರೇಷ್ಮೆ ಉದ್ಯಮ, ಕೈವಾರದ ಬಕಾಸುರ ವಧೆ, ಜಿಲ್ಲೆಯ ಭಾರತ ರತ್ನಗಳಾದ ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ಸಿ.ಎನ್.ಆರ್.ರಾವ್ ಅವರ ಕುರಿತು ಸ್ತಬ್ಧಚಿತ್ರಗಳು ಈ ಹಿಂದೆ ಮೈಸೂರು ದಸರಾದಲ್ಲಿ ಪಾಲ್ಗೊಂಡಿದ್ದವು.