ಹೊಸದಿಲ್ಲಿ: ಸೂರ್ಯನ ಬಾಹ್ಯ ವಾತಾವರಣ ಅಧ್ಯಯನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಕಳುಹಿಸಿರುವ ಆದಿತ್ಯ ಎಲ್1 ಬಾಹ್ಯಾಕಾಶ ನೌಕೆ ಎರಡನೇ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದೆ ಎಂದು ಇಸ್ರೋ ತಿಳಿಸಿದೆ.
ಸೆ.5 ರಂದು ಮಧ್ಯರಾತ್ರಿ 2:45 ಕ್ಕೆ ಆದಿತ್ಯ ಎಲ್1 ನೌಕೆ ಎರಡನೇ ಕಕ್ಷೆಯನ್ನು ಪ್ರವೇಶಿಸಿದೆ ಎಂದು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಇಸ್ರೋ ಮಾಹಿತಿ ಹಂಚಿಕೊಂಡಿದೆ.
ಆದಿತ್ಯ ಎಲ್1 ನೌಕೆಯು ಸೆ.10 ರಂದು ರಾತ್ರಿ 2:30 ಕ್ಕೆ ಮೂರನೇ ಕಕ್ಷೆಯನ್ನು ಪ್ರವೇಶಿಸಲಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಸೆ.3 ರಂದು ನೌಕೆಯು ಮೊದಲ ಕಕ್ಷೆಯನ್ನು ಯಶಸ್ವಿಯಾಗಿ ಬದಲಾಯಿಸಿತ್ತು.
ಸೂರ್ಯನ ಅಧ್ಯಯನಕ್ಕಾಗಿ ‘ಆದಿತ್ಯ ಎಲ್1’ ಬಾಹ್ಯಾಕಾಶ ನೌಕೆಯನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಇಸ್ರೋ ಸೆ.2 ರಂದು ಉಡಾವಣೆ ಮಾಡಿತು. ಭಾರತದ ಮೊದಲ ಸೌರ ವೀಕ್ಷಣಾಲಯವನ್ನು ಸೂರ್ಯ ಮತ್ತು ಭೂಮಿ ನಡುವಿನ L1 ಪಾಯಿಂಟ್‌ನಲ್ಲಿ ಇರಿಸುವ ಮೂಲಕ ಸೂರ್ಯನ ಹೊರಗಿನ ವಾತಾವರಣ ಅಧ್ಯಯನ ಮಾಡುವ ಗುರಿಯನ್ನು ಈ ಮಿಷನ್ ಹೊಂದಿದೆ.