ಕೆನಡಾದ ಮಸೀದಿಯಲ್ಲಿ ಮುಸ್ಲಿಮರ ಮೇಲೆ ವಾಹನ ಹರಿಸಲು ಯತ್ನಿಸಿದ ಭಾರತೀಯ ಶರಣ್ ಕರುಣಾಕರನ್ ಬಂಧನ

Prasthutha|

ಟೊರೊಂಟೊ: ಒಂಟಾರಿಯೊ ನಗರದ ಮಸೀದಿಯ ಆವರಣದಲ್ಲಿ ಮುಸ್ಲಿಮರ ಮೇಲೆ ವಾಹನ ಹರಿಸಲು ಯತ್ನಿಸಿದ ಭಾರತೀಯ ಮೂಲದ ವ್ಯಕ್ತಿಯನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ.

- Advertisement -

ಮಸೀದಿಗೆ ಪ್ರಾರ್ಥನೆಗೆ ಬಂದಿದ್ದ ಮುಸ್ಲಿಮರಿಗೆ ಬೆದರಿಕೆ, ಧಾರ್ಮಿಕ ನಿಂದನೆ ಮತ್ತು ಅಪಾಯಕಾರಿ ವಾಹನ ಚಲಾಯಿಸಿದ ಆರೋಪದಲ್ಲಿ 28 ವರ್ಷದ ಭಾರತೀಯ ಮೂಲದ ವ್ಯಕ್ತಿಯನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಒಂಟಾರಿಯೊದ ಮಾರ್ಕಮ್‌ನಲ್ಲಿರುವ ಡೆನಿಸನ್ ಸ್ಟ್ರೀಟ್‌ನಲ್ಲಿರುವ ಮಸೀದಿಯ ಆವರಣಕ್ಕೆ ಬಂದ ಆರೋಪಿ ಶರಣ್ ಕರುಣಾಕರನ್ ನೇರವಾಗಿ ಆರಾಧಕರತ್ತ ವಾಹನವನ್ನು ಓಡಿಸುತ್ತಾ ಬೆದರಿಕೆ ಮತ್ತು ಧಾರ್ಮಿಕ ನಿಂದನೆ ಮಾಡಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

- Advertisement -

ಆರೋಪಿ ಶರಣ್ ಕರುಣಾಕರನ್ ಸ್ಥಳದಲ್ಲಿ ಅಪಾಯಕಾರಿಯಾಗಿ ವಾಹನ ಚಲಾಯಿಸಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಬೆದರಿಕೆ, ಮಾರಕಾಸ್ತ್ರಗಳಿಂದ ಹಲ್ಲೆ, ಅಪಾಯಕಾರಿ ವಾಹನ ಚಾಲನೆ ಇತ್ಯಾದಿ ಆರೋಪಗಳನ್ನು ಹೊರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯ ಸಂಸದೆ ಹಾಗೂ ವಾಣಿಜ್ಯ ಸಚಿವೆ ಮೇರಿ ಎನ್‌ಜಿ, ಮಸೀದಿಯಲ್ಲಿದ್ದ ಆರಾಧಕರ ಮೇಲಿನ ದಾಳಿಯ ಬಗ್ಗೆ ತಿಳಿದು ವಿಚಲಿತಳಾದೆ ಎಂದು ತಿಳಿಸಿದರು.

“ಇಸ್ಲಾಮಿಕ್ ಸೊಸೈಟಿ ಆಫ್ ಮರ್ಕಮ್‌ನಲ್ಲಿ ನಡೆದ ದಾಳಿ ಮತ್ತು ಜನಾಂಗೀಯ ವರ್ತನೆಯ ಬಗ್ಗೆ ಕೇಳಿ ವಿಚಲಿತಳಾದೆನು. ಕೆನಡಾದ ಮಾರ್ಕಮ್‌ನಲ್ಲಿರುವ ಮುಸ್ಲಿಮರೇ, ನಾನು ನಿಮ್ಮೊಂದಿಗೆ ಇದ್ದೇನೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.



Join Whatsapp