ಶೀಘ್ರವೇ ಜೆಡಿಎಸ್ ಜನತಾ ಪ್ರಣಾಳಿಕೆ ಬಿಡುಗಡೆ

Prasthutha|

ಬಿ.ಎಂ.ಫಾರೂಕ್ ಅಧ್ಯಕ್ಷತೆಯಲ್ಲಿ ಪ್ರಣಾಳಿಕೆ ಸಮಿತಿಯ ಮಹತ್ವದ ಸಭೆ

- Advertisement -

ಬೆಂಗಳೂರು: ಪ್ರಸಕ್ತ ಚುನಾವಣೆಗೆ ಜಾತ್ಯತೀತ ಜನತಾದಳದ ಪ್ರಣಾಳಿಕೆ ಸಿದ್ಧವಾಗಿದ್ದು, ಪ್ರಣಾಳಿಕಾ ರಚನಾ ಸಮಿತಿಯ ಮಹತ್ವದ ಸಭೆ ನಗರದಲ್ಲಿ ನಡೆಯಿತು.

- Advertisement -

ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಅಧ್ಯಕ್ಷತೆಯ ಸಮಿತಿಯು, ಪ್ರಣಾಳಿಕೆಯ ಕರುಡು ಪ್ರತಿಯನ್ನು ಪರಾಮರ್ಶೆ ನಡೆಸಿತು. ಅಲ್ಲದೆ, ಪಕ್ಷದ ವತಿಯಿಂದ ಜನತೆಗೆ ನೀಡಲು ಉದ್ದೇಶಿಸಿರುವ ಜೆಡಿಎಸ್ ಪರಿಹಾರ ಪತ್ರದ ಬಗ್ಗೆಯೂ ಚರ್ಚೆ ನಡೆಸಲಾಯಿತು.

ಸಮಿತಿಯ ಸದಸ್ಯರಾದ ಮಾಜಿ ಸಚಿವರಾದ ಬಂಡೆಪ್ಪ ಕಾಷೆಂಪೂರ್, ಮಾಜಿ ಸಂಸದರಾದ ಕುಪೆಂದ್ರ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಕೆ.ಎನ್.ತಿಪ್ಪೇಸ್ವಾಮಿ ಅವರು ಸಭೆಯಲ್ಲಿ ಭಾಗವಹಿಸಿದ್ದರು.

ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷೆಯ ಪಂಚರತ್ನ ಯೋಜನೆಗಳು ಹಾಗೂ ಅವರು ಪಂಚರತ್ನ ರಥಯಾತ್ರೆ ವೇಳೆ ಘೋಷಣೆ ಮಾಡಿರುವ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ಪ್ರಣಾಳಿಕೆಯಲ್ಲಿ ಅಡಕಗೊಳಿಸಲಾಗಿದ್ದು, ಮಾಜಿ ಮುಖ್ಯಮಂತ್ರಿಗಳ ಕನಸಿನ ಕಾರ್ಯಕ್ರಮಗಳನ್ನು ಜನರ ಬಳಿಗೆ ತೆಗೆದುಕೊಂಡು ಹೋಗಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಪಂಚರತ್ನ ಯೋಜನೆಗಳಾದ ಆರೋಗ್ಯ, ಶಿಕ್ಷಣ, ಕೃಷಿ, ನೀರಾವರಿ, ವಸತಿ, ಉದ್ಯೋಗ ಕಾರ್ಯಕ್ರಮಗಳ ಬಗ್ಗೆ ಹಾಗೂ ಅವುಗಳನ್ನು ಜಾರಿ ಮಾಡಲು ಅಗತ್ಯವಾದ ಆರ್ಥಿಕ ಸಂಪನ್ಮೂಲಗಳ ಬಗ್ಗೆಯೂ ಸಮಿತಿ ಅವಲೋಕನ ಮಾಡಿತು.

ಶೀಘ್ರವೇ ಪ್ರಣಾಳಿಕೆಗೆ ಅಂತಿಮ ಸ್ಪರ್ಶ ನೀಡಲಾಗುವುದು. ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಅವರ ಜತೆ ಚರ್ಚೆ ನಡೆಸಿದ ನಂತರ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು ಎಂದು ಸಮಿತಿ ಅಧ್ಯಕ್ಷ ಫಾರೂಕ್ ಅವರು ತಿಳಿಸಿದರು.

65 ವರ್ಷ ಮೀರಿದ ಹಿರಿಯ ನಾಗರಿಕರಿಗೆ ಮಾಸಿಕ 5,000 ರೂ. ಮಾಶಾಸನ, ವಿಕಲಚೇತನರು ಹಾಗೂ ವಿಧವೆಯರಿಗೆ ಮಾಸಿಕ 2,500 ರೂ. ಮಾಶಾಸನ, ಉನ್ನತ ಶಿಕ್ಷಣ ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ, ಅಡುಗೆ ಅನಿಲ ಸಿಲಿಂಡರ್ ಗೆ ಶೇ.50% ಸಬ್ಸಿಡಿ, ಆಟೋ ಚಾಲಕರಿಗೆ ಮಾಸಿಕ 2,000 ರೂ. ಗೌರವ ಧನ, ವಿರಳ ಕಾಯಿಲೆಯಿಂದ ಬಳಲುತ್ತಿರುವವರಿಗೆ 25 ಲಕ್ಷ ರೂ.ವರೆಗೆ ಪರಿಹಾರ ಸೇರಿದಂತೆ ಅನೇಕ ಅಂಶಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು ಎಂದು ಅವರು ಹೇಳಿದರು.

Join Whatsapp