ಮಂಗಳೂರು : ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾ.ಪಂ. ವ್ಯಾಪ್ತಿಯ ಶೇಕಮಲೆ ದಲಿತ ಕಾಲೊನಿಯ ರಸ್ತೆ ಸಮಸ್ಯೆ ಇತ್ಯರ್ಥಗೊಂಡಿದ್ದು, ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ SDPI ಬೆಂಬಲಿತ ಅಭ್ಯರ್ಥಿಯೊಬ್ಬರು ನೀಡಿದ್ದ ಭರವಸೆಯನ್ನು ಚುನಾವಣೆಯಲ್ಲಿ ಸೋತರೂ, ಫಲಿತಾಂಶದ ದಿನವೇ ತಮ್ಮ ಚುನಾವಣಾ ಪೂರ್ವ ಭರವಸೆಯನ್ನು ಈಡೇರಿಸುವ ಮೂಲಕ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸ್ಥಳೀಯ ಜಾಗದ ಮಾಲಕ ಮತ್ತು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ SDPI ಬೆಂಬಲಿತ ಅಭ್ಯರ್ಥಿಯ ಸಹಕಾರದಿಂದ 50 ವರ್ಷಕ್ಕಿಂತಲೂ ಹಳೆಯ ರಸ್ತೆ ಬೇಡಿಕೆ ಈಗ ಈಡೇರಿದೆ.
ಈ ದಲಿತ ಕಾಲೊನಿಗೆ ಹೋಗಲು ಸರಿಯಾದ ಮಾರ್ಗವಿರಲಿಲ್ಲ. ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಭೂಮಿಯಲ್ಲಿ ನಡೆದುಕೊಂಡು ಹೋಗಲು ಕಾಲುದಾರಿ ನೀಡಿದ್ದರು. ಈ ಕಾಲುದಾರಿಯ ಬದಿಯಲ್ಲಿ ಸಣ್ಣದೊಂದು ತೊರೆ ಹರಿಯುತ್ತಿದ್ದು, ಮಳೆಗಾಲದಲ್ಲಿ ಕಷ್ಟವಾಗುತ್ತಿತ್ತು, ಈ ವೇಳೆ ಜಾಗದ ಮಾಲಿಕರು ದಲಿತರಿಗೆ ತಮ್ಮ ತೋಟದಲ್ಲೇ ಹಾದು ಹೋಗಲು ದಾರಿ ಮಾಡಿಕೊಡುತ್ತಿದ್ದರು.
ಆದರೆ, ಇದೀಗ ದಲಿತರಿಗೆ ತಮ್ಮ ಮನೆಗಳಿಗೆ ತೆರಳಲು ವಾಹನಗಳು ಓಡಾಡಬಹುದಾದಷ್ಟು ದೊಡ್ಡ ರಸ್ತೆಯೇ ನಿರ್ಮಾಣವಾಗಿದೆ. ಅರಿಯಡ್ಕ 3ನೇ ವಾರ್ಡ್ ನಲ್ಲಿ SDPI ಬೆಂಬಲಿತ ಅಭ್ಯರ್ಥಿ ಜಾಬಿರ್ ಅರಿಯಡ್ಕರವರು ಸ್ಪರ್ಧಿಸಿದ್ದರು. ಈ ವೇಳೆ ಈ ಕಾಲುದಾರಿಯನ್ನು ರಸ್ತೆಯಾಗಿ ಪರಿವರ್ತಿಸಲು ಜಾಗದ ಮಾಲಕರಾದ, ಉದ್ಯಮಿ ಯೂಸುಫ್ ಹಾಜಿ ದರ್ಖಾಸ್ ರವರಲ್ಲಿ ಮನವಿ ಮಾಡಿದ್ದರು. ಅಲ್ಲದೆ, ದಲಿತರ ರಸ್ತೆ ಸಮಸ್ಯೆ ಬಗ್ಗೆ ಅವರಿಗೆ ಮನವರಿಕೆ ಮಾಡಿದ್ದರು. ಈ ನಡುವೆ, ಹೇಮನಾಥ ಶೆಟ್ಟಿ ಕಾವು ಮತ್ತು ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಅವರೂ ಈ ಬಗ್ಗೆ ಯೂಸುಫ್ ಹಾಜಿಯವರಲ್ಲಿ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಹೀಗಾಗಿ ಈಗಾಗಲೇ ನೀಡಿದ್ದ ಕಾಲುದಾರಿಯನ್ನು ರಸ್ತೆಯನ್ನಾಗಿ ಪರಿವರ್ತಿಸಲು ಅವರು ಸಮ್ಮತಿಸಿದ್ದರು. ಮಾತುಕತೆಗೆ ಆಗಮಿಸಿದ್ದ ಜಾಬಿರ್ ಮತ್ತು ಅವರ ಜೊತೆಗಿದ್ದವರಿಗೆ, ನೀನು ಗೆದ್ದು ಬಂದು ರಸ್ತೆಗೆ ಶಂಕುಸ್ಥಾಪನೆ ಮಾಡಬೇಕು ಎಂದು ಯೂಸುಫ್ ಹಾಜಿಯವರು ಹೇಳಿದ್ದರು. ಅಂದೇ ರಸ್ತೆ ನಿರ್ಮಾಣಕ್ಕೆ ಮುಹೂರ್ತವೂ ಫಿಕ್ಸ್ ಆಗಿತ್ತು.
ಈ ಹಿನ್ನೆಲೆಯಲ್ಲಿ ಜಾಬಿರ್ ಅವರು ತಾನು ಚುನಾವಣೆಯಲ್ಲಿ ಸೋತರೂ, ಗೆದ್ದರೂ ದಲಿತ ಕಾಲನಿಗೆ ತೆರಳುವ ಕಾಲುದಾರಿಯನ್ನು ರಸ್ತೆಯಾಗಿ ಪರಿವರ್ತಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಚುನಾವಣೆ ಫಲಿತಾಂಶ ಹೊರಬಿದ್ದಾಗ ಜಾಬಿರ್ ಅವರು ಅಲ್ಪಮತಗಳಿಂದ ಸೋಲು ಅನುಭವಿಸಿದ್ದರು. ಆದರೆ, ಎದೆಗುಂದದ ಜಾಬೀರ್ ಅವರು, ಚುನಾವಣಾ ಫಲಿತಾಂಶದ ದಿನ ಸಂಜೆಯೇ, ಸ್ಥಳಕ್ಕೆ ತೆರಳಿ, ದಲಿತ ಕುಟುಂಬದ ಸದಸ್ಯರು ಮತ್ತು ಜಾಗದ ಮಾಲಕರನ್ನು ಕರೆಸಿ, ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಚುನಾವಣಾ ಪೂರ್ವದಲ್ಲಿ ತಾವು ಕೊಟ್ಟಿದ್ದ ಮಾತನ್ನು ಚುನಾವಣೆಯಲ್ಲಿ ಸೋತರೂ ಈಡೇರಿಸುವ ಮೂಲಕ ದಲಿತ ಕುಟುಂಬಗಳ ಕಷ್ಟಕ್ಕೆ ಹೆಗಲು ಕೊಟ್ಟಿದ್ದಾರೆ. ಇದು ಈಗ ಸುದ್ದಿಯಾಗಿದ್ದು, ಎಲ್ಲೆಡೆಯಿಂದ ಜಾಬಿರ್ ಅವರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.