January 8, 2021

ಉಡುಪಿ: ಹಾವಂಜೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಜಿತ್ ಕುಮಾರ್ ಸದಸ್ಯತ್ವ ಅನರ್ಹಗೊಳಿಸುವಂತೆ ದೂರು

►► ತಪ್ಪು ಹಾಗೂ ಸುಳ್ಳು ಮಾಹಿತಿ ನೀಡಿದ ಆರೋಪ

ಉಡುಪಿ: ಇಲ್ಲಿನ ಹಾವಂಜೆ ಗ್ರಾಮ ಪಂಚಾಯತ್ ನ ಮುಗ್ಗೇರಿ 2ನೇ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿರುವ ಅಜಿತ್ ಕುಮಾರ್ ಪೂಜಾರಿಯವರ ಸದಸ್ಯತ್ವವನ್ನು ಅನರ್ಹಗೊಳಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಮುಂದೆ ದೂರು ಸಲ್ಲಿಕೆಯಾಗಿದೆ.

ಅಜಿತ್ ರವರು ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವಾಗ ಚುನಾವಣಾ ಘೋಷಣಾ ಪತ್ರದಲ್ಲಿ ಸುಳ್ಳು ಮತ್ತು ತಪ್ಪು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅವರ ಸದಸ್ಯತ್ವ ರದ್ದುಗೊಳಿಸಬೇಕೆಂದು ದಲಿತ ಸಂಘರ್ಷ ಸಮಿತಿ (ಭೀಮವಾದ)ಯ ನಾಯಕ ಶೇಖರ್ ಹಾವಂಜೆ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

“ಕರ್ನಾಟಕ ಪಂಚಾಯತ್ ರಾಜ್ 1993 ಅಧಿನಿಯಮ 12ರ ‘ಹೆಚ್’ ರಲ್ಲಿ ತಿಳಿಸಿರುವಂತೆ ಗ್ರಾಮಪಂಚಾಯತ್ ಆದೇಶದ ಮೂಲಕ ಕಾಮಗಾರಿಯಲ್ಲಿ ಅಥವಾ ಗ್ರಾಮ ಪಂಚಾಯತ್ ನೊಂದಿಗೆ ಅಥವಾ ಅದರ ಮೂಲಕ ಅಥವಾ ಅದರ ಪರವಾಗಿ ಮಾಡಿಕೊಂಡ ಯಾವುದೇ ಕರಾರಿನಲ್ಲಿ ಅಥವಾ ಉದ್ಯೋಗದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪಾಲು ಅಥವಾ ಹಿತಾಸಕ್ತಿಯನ್ನು ಹೊಂದಿದ್ದರೆ ಅಂತಹ ವ್ಯಕ್ತಿಗಳು ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಅನರ್ಹರಾಗಿರುತ್ತಾರೆ” ಎಂದು ಶೇಖರ್ ಹಾವಂಜೆ ದೂರಿನಲ್ಲಿ ತಿಳಿಸಿದ್ದಾರೆ.

“ಅಜಿತ್ ಕುಮಾರ್ ಪೂಜಾರಿಯವರು ಅಭ್ಯರ್ಥಿ ಗ್ರಾಮ ಪಂಚಾಯತ್ ಅಧೀನದ ಕಟ್ಟಡದ ಡೋರ್ ನಂ3-139 ಅಂಗಡಿ ಕೋಣೆಯನ್ನು ವ್ಯಾಪಾರದ ಉದ್ದೇಶಕ್ಕೆ ಬಳಸಲು 2020ರ ಡಿ.16ರಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಕರಾರು ಮಾಡಿಕೊಂಡಿರುತ್ತಾರೆ. ಈ ಹಿನ್ನೆಲೆಯಲ್ಲಿ ಅಜಿತ್ ಕುಮಾರ್ ರ ಸದಸ್ಯತ್ವವನ್ನು ರದ್ದುಗೊಳಿಸಬೇಕು ” ಎಂದು ಅವರು ಒತ್ತಾಯಿಸಿದ್ದಾರೆ.

ಟಾಪ್ ಸುದ್ದಿಗಳು

ವಿಶೇಷ ವರದಿ