ಮುಂಬೈ: ಎಲಿಫೆಂಟ್ ವಿಸ್ಪರರ್ಸ್ , ನಾಟು ನಾಟು ಹೊರತಾಗಿ ಮುಂಬೈಯ ಬಾಂದ್ರಾದ ಕುಟುಂಬವೊಂದು ಏಳು ಆಸ್ಕರ್ ಗೆದ್ದ ಸಿನಿಮಾದಲ್ಲಿ ಸಹಾಯಕ ಸಂಕಲನಕಾರನಾಗಿದ್ದ ತಮ್ಮ ಮಗನ ಗೆಲುವನ್ನು ವಿಜಯೋತ್ಸವವಾಗಿ ಆಚರಿಸಿದೆ.
‘ಎವೆರಿತಿಂಗ್ ಎವೆರಿವೇರ್ ಆಲ್ ಎಟ್ ವನ್ಸ್’ ಏಳು ಆಸ್ಕರ್ ಗೆದ್ದಿದ್ದು 30ರ ಪ್ರಾಯದ ಆಶಿಸ್ ಡಿಮೆಲ್ಲೋ ಆ ಚಿತ್ರ ತಂಡದಲ್ಲಿದ್ದ. ಆ ಚಿತ್ರವು ಸಂಕಲನ ವಿಭಾಗದಲ್ಲಿ ಆಸ್ಕರ್ ಗೆದ್ದಿದೆ. ಸಂಕಲನಕಾರ ಪೌಲ್ ರೋಜರ್ಸ್ ರಿಗೆ ಡಿಮೆಲ್ಲೋ ಸಹಾಯಕರಾಗಿದ್ದರು. ಇನ್ನೊಬ್ಬ ಸಹಾಯಕ ಸಂಕಲನಕಾರರೆಂದರೆ ಜೆಕುನ್ ಮಾವೋ. ಆಶಿಸ್ ಡಿಮೆಲ್ಲೋರ ತಂದೆ ಡೆಂಜಿಲ್ ಡಿಮೆಲ್ಲೋ ಬಾಂಬೆ ಹೈಕೋರ್ಟ್ ವಕೀಲರು. ತಾಯಿ ರುತ್. ಇವರ ಕುಟುಂಬವು ಬಾಂದ್ರಾದ ಮೆಹಬೂಬ್ ಸ್ಟುಡಿಯೋದ ಪಕ್ಕ ವಾಸಿಸುತ್ತಿದೆ.
“ಇತಿಹಾಸ ನಿರ್ಮಾಣವಾದ ಕೋಣೆಯಲ್ಲಿ ನಾನು ಇದ್ದುದು ವಾಸ್ತವಿಕ. ನಾವೆಲ್ಲ ಈ ಚಿತ್ರಕ್ಕಾಗಿ ಕಠಿಣವಾಗಿ ಕೆಲಸ ಮಾಡಿದ್ದೇವೆ. ಅದರ ಫಲವಾಗಿ ಚಿತ್ರವು ಪ್ರೇಕ್ಷಕರು, ವಿಮರ್ಶಕರು ಮತ್ತು ಈಗ ಆಸ್ಕರ್ ನಲ್ಲಿ ಸೂಕ್ತ ಫಲ ಪಡೆದಿದೆ. ಪ್ರಶಸ್ತಿಯು ಪಟ್ಟ ಶ್ರಮವನ್ನೆಲ್ಲ ಸಾರ್ಥಕವಾಗಿಸಿದೆ” ಎಂದು ಆಶಿಸ್ ಡಿಮೆಲ್ಲೋ ಹೇಳಿದರು.
“ಬಿಗಿಯಾದ ಸಿನಿಮಾ ಚರಿತ್ರೆಯ ಮುಂಬೈಯಿಂದ ನನ್ನ ಪ್ರಯಾಣ ಆರಂಭವಾಗಿದೆ. ಹಾಲಿವುಡ್ ಹುಚ್ಚಿನ ಲಾಸ್ ಏಂಜೆಲ್ಸ್ ನಲ್ಲಿ ಅರಳಿದೆ. ಮುಂಬೈಯಲ್ಲಿ ಬೆಳೆದುದು ನನ್ನ ಸಿನಿಮಾ ಪ್ರೀತಿಗೆ ಕಾರಣ” ಎಂದೂ ಡಿಮೆಲ್ಲೋ ಹೇಳಿದರು.
ಡಿಮೆಲ್ಲೋ ಮುಂಬೈಯ ಸಂತ ಕ್ಸೇವಿಯರ್ ಕಾಲೇಜಿನಲ್ಲಿ ಮಾಸ್ ಮೀಡಿಯಾ ಪದವಿಯನ್ನು ಪಡೆದಿದ್ದಾರೆ. “2013ರಲ್ಲಿ ಪದವಿ ಪಡೆದ ಬಳಿಕ ಒಂದು ಸ್ಥಳೀಯ ಚಿತ್ರ ಕಂಪೆನಿಯಲ್ಲಿ ಕೆಲಸ ಮಾಡಿದೆ. ಅಲ್ಲಿ ಸಹಾಯಕ ಸಂಕಲನಕಾರನಾಗಿ ಹಲವಾರು ವಾಣಿಜ್ಯ ಕೆಲಸಗಳನ್ನು ಮತ್ತು ಮರ್ದಾನಿ ಚಿತ್ರಕ್ಕೆ ಕೆಲಸ ಮಾಡಿದೆ. ಸಂಲನದೊಂದಿಗೆ ಸಾಫ್ಟ್ ವೇರ್ ಕೆಲಸಗಳನ್ನೂ ನಾನು ಕಲಿತುಕೊಂಡೆ.” ಅವರು ಹೇಳಿದರು.
2015ರಲ್ಲಿ ಲಾಸ್ ಏಂಜೆಲ್ಸ್ ನ ಅಮೆರಿಕ ಫಿಲಂ ಇನ್ ಸ್ಟಿಟ್ಯೂಟಿನ ಎಡಿಟಿಂಗ್ ಪ್ರೋಗ್ರಾಮಿಗೆ ಸೇರಿದ ಡಿಮೆಲ್ಲೋ 2017ರಲ್ಲಿ ಮಾಸ್ಟರ್ ಡಿಗ್ರಿ ಪಡೆದರು. ಚಿತ್ರೋತ್ಸವಗಳಲ್ಲಿ ಸ್ಪರ್ಧಿಸಿದ ಹಲವು ಸಣ್ಣ ಚಿತ್ರಗಳಲ್ಲಿ ಕೆಲಸ ಮಾಡಿದರು.
“ಸಂಕಲನ ಕೆಲಸ ಬಹುತೇಕ ಪ್ರತ್ಯೇಕತೆಯಲ್ಲಿ ನಡೆಯುತ್ತದೆ. ಕೋವಿಡ್ ಅದನ್ನು ಅನಿವಾರ್ಯ ಮಾಡಿತು. ಸಾಂಕ್ರಾಮಿಕ ಆರಂಭವಾದಾಗ ಅದು ನಮಗೆಲ್ಲ ಅಪರಿಚಿತ, ಆದರೆ ಕ್ರಿಯಾತ್ಮಕವಾಗಿ ಕೆಲಸ ಮಾಡಲು ಅದು ಪೂರಕವಾಯಿತು. ನಿರ್ದೇಶಕರಾದ ಡೇನಿಯಲ್ ಕ್ವಾಮ್ ಮತ್ತು ಡೇನಿಯಲ್ ಶಿನೆರ್ಟ್ ಸಂಕಲನದ ಪರಿಣಾಮದ ಬಗೆಗೆ ಸಂತಸಗೊಂಡಿದ್ದರು. ಹಲವಾರು ಫಾರ್ಮೇಟಿನಲ್ಲಿ ತೆಗೆದುದನ್ನು ಸೇರಿಸುವಲ್ಲಿ ನಾವು ಗೆದ್ದಿದ್ದೇವೆ” ಎಂದೂ ಡಿಮೆಲ್ಲೋ ಹೇಳಿದರು.
ಏಳು ಆಸ್ಕರ್ ಗೆದ್ದ ಚಿತ್ರದ ಸಹಾಯಕ ಸಂಕಲನಕಾರನಾಗಿದ್ದ ಬಾಂದ್ರಾದ ಹುಡುಗ !
Prasthutha|