ರೌಡಿಶೀಟರ್​ ಬರ್ಬರ ಹತ್ಯೆ; ಇನ್ನೋರ್ವ ಗಂಭೀರ

Prasthutha|

ದಾವಣಗೆರೆ: ನ್ಯಾಯಾಲಯಕ್ಕೆ ಹಾಜರಾಗಿ ಬೈಕ್‌ನಲ್ಲಿ ವಾಪಸ್ ಬರುತ್ತಿದ್ದ ಇಬ್ಬರು ರೌಡಿಶೀಟರ್​ಗಳ ತಲವಾರು ದಾಳಿ ನಡೆದಿದ್ದು, ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಚೀಲೂರು ಗ್ರಾಮದ ಬಳಿ ನಡೆದಿದೆ.

- Advertisement -

ಮತ್ತೋರ್ವ ರೌಡಿಶೀಟರ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ರೌಡಿಶೀಟರ್ ಆಂಜನೇಯ ಅಲಿಯಾಸ್​​ ಅಂಜನಿ (30) ಹತ್ಯೆಯಾಗಿದ್ದು, ಮಧು (28) ಗಂಭೀರವಾಗಿ ಗಾಯಗೊಂಡ ರೌಡಿಶೀಟರ್​. ಬೈಕ್​ನಲ್ಲಿ ತೆರಳುತ್ತಿದ್ದಾಗ ಇತರೆ ರೌಡಿಶೀಟರ್‌ಗಳು ಅಂಜನಿ ಮತ್ತು ಮಧುನನ್ನು ಅಡ್ಡಗಟ್ಟಿ ತಲವಾರು ದಾಳಿ ನಡೆಸಿದ್ದಾರೆ.

- Advertisement -

ಶಿವಮೊಗ್ಗದ ರೌಡಿಶೀಟರ್​ ಹಂದಿ ಅಣ್ಣಿ ಕೊಲೆ ಪ್ರಕರಣದ ಆರೋಪಿಗಳಾದ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ನಿವಾಸಿಗಳಾದ ಅಂಜನಿ ಮತ್ತು ಮಧು ಕೆಲ ದಿನಗಳ ಹಿಂದೆ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದರು. ಅದರಂತೆ ಇಬ್ಬರು ಬೈಕ್​ನಲ್ಲಿ ಹೋಗುತ್ತಿದ್ದರು. ಈ ವೇಳೆ ಸ್ಕಾರ್ಪಿಯೊ ಕಾರಿನಲ್ಲಿ ಬಂದ ಇತರೆ ರೌಡಿಶೀಟರ್​ಗಳು ಬೈಕ್ ಅಡ್ಡಗಟ್ಟಿ ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕಾರು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆಯಲ್ಲಿ ಅಂಜನಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಗೊಂಡ ಮಧುನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಾಗಿದೆ. ಘಟನಾ ಸ್ಥಳಕ್ಕೆ ನ್ಯಾಮತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Join Whatsapp