ಕರ್ನಾಟಕದ ಗ್ರಾಮೀಣ ಬ್ಯಾಂಕಿಂಗ್ ವ್ಯವಸ್ಥೆ ಅಯೋಮಯವಾಗಿದೆ: ಜೆಡಿಎಸ್

Prasthutha|

ಬೆಂಗಳೂರು: ಗ್ರಾಮೀಣ ಜನರು ಬ್ಯಾಂಕಿಂಗ್ ಸೇವೆಗಳಿಂದ ವಂಚಿತರಾಗುತ್ತಿರುವ ಬಗ್ಗೆ  ಜೆಡಿಎಸ್ ಅಸಮಾಧಾನ ವ್ಯಕ್ತಪಡಿಸಿದೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ ಜೆಡಿಎಸ್, ಬ್ಯಾಂಕಿಂಗ್ ಕ್ಷೇತ್ರದ ಪರೀಕ್ಷೆಗಳು ಕನ್ನಡದಲ್ಲಿ ನಡೆಯದ ಕಾರಣ ಹಾಗೂ ಅನ್ಯ ರಾಜ್ಯಗಳಿಂದ ಆಯ್ಕೆಯಾಗುವ ಸಿಬ್ಬಂದಿಗಳು ಕನ್ನಡ ಕಲಿಯದೇ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸಂವಹನ ನಡೆಸುವುದರಿಂದಾಗಿ ಕರ್ನಾಟಕದ ಗ್ರಾಮೀಣ ಬ್ಯಾಂಕಿಂಗ್ ವ್ಯವಸ್ಥೆ ಅಯೋಮಯವಾಗಿದೆ. ಗ್ರಾಮಗಳ ಜನರು ಬ್ಯಾಂಕಿಂಗ್ ಸೇವೆಗಳಿಂದ ವಂಚಿತರಾಗುತ್ತಿದ್ದಾರೆ. ಸೇವಾ ಕ್ಷೇತ್ರದ ಅನುಕೂಲಗಳನ್ನು ಪಡೆಯಲು ಭಾಷೆಯ ಕಾರಣದಿಂದ ಜನರು ವಂಚಿತರಾಗುವ ಪರಿಸ್ಥಿತಿ ಮನಸ್ಸಿಗೆ ನೋವು ತರುತ್ತದೆ.‌ ಸರ್ಕಾರದ ನೀತಿ-ನಿಯಮಾವಳಿಗಳು ಜನರ ಅಶೋತ್ತರಗಳಿಗೆ ದನಿಯಾಗಬೇಕು. ಅದು ಬಿಟ್ಟು, ಸೇವಾ ಕ್ಷೇತ್ರಗಳಿಂದ ಗ್ರಾಮಗಳ ಜನರು ದೂರಾಗುವಂತೆ ಮಾಡಬಾರದು ಎಂದು ಆಗ್ರಹಿಸಿದೆ.

ಪ್ರಾದೇಶಿಕ ಭಾಷೆ, ಅಧಿಕಾರ, ಬೇಡಿಕೆಗಳನ್ನು ಕತ್ತು ಹಿಸುಕಿ ಸಂತಸಪಡುವ ವಿಕೃತ ನಡೆಯು ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರಕ್ಕಂತೂ ಅಭ್ಯಾಸವಾಗಿ ಹೋಗಿದೆ. ಕನ್ನಡಿಗರದ್ದೇ ಆದ ವಿಜಯಾ ಬ್ಯಾಂಕ್ ಮುಳುಗಿಸಿದ್ದಾಯ್ತು. ಬ್ಯಾಂಕಿಂಗ್ ಪರೀಕ್ಷೆಗಳ ನಿಯಮಗಳಲ್ಲಿ ಬದಲಾವಣೆ ಮಾಡಿದ ಕಾರಣ, ಅಲ್ಲಿನ ಹುದ್ದೆಗಳು ಅನ್ಯ ರಾಜ್ಯದವರ ಪಾಲಾಗುತ್ತಿವೆ. ಬ್ಯಾಂಕ್ ಗಳು ಸ್ಥಳೀಯ ಭಾಷೆಗಳಲ್ಲೇ ಸಂವಹನ ಮಾಡಬೇಕೆಂದು ಆದೇಶಿಸಿದರೆ ನಡೆಯುವುದಿಲ್ಲ. ಅದು ಕಾರ್ಯಗತ ಆಗಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳಲೇಬೇಕಿದೆ. ಇಲ್ಲದಿದ್ದರೆ ನಮ್ಮ ಗ್ರಾಮೀಣ ಭಾಗದ ಜನತೆ ಬ್ಯಾಂಕಿಂಗ್ ನ ಎಲ್ಲ ಸೇವೆಗಳನ್ನು ಪಡೆಯಲು ಹರಸಾಹಸ ಪಡಬೇಕಾಗುತ್ತದೆ ಎಂದು ಹೇಳಿದೆ.

- Advertisement -

ಕೇಂದ್ರ ಬಿಜೆಪಿ ಸರ್ಕಾರಕ್ಕೆ ಕನ್ನಡದಲ್ಲಿ ಪರೀಕ್ಷೆಗಳನ್ನು ನಡೆಸಲು ಹಲವು ಬಾರಿ ವಿನಂತಿ ಮಾಡಿಕೊಳ್ಳಲಾಗಿದೆ. ಅವರು ನಮ್ಮ ಬೇಡಿಕೆಗಳಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡುವುದಿಲ್ಲ. ನಮ್ಮ ರಾಜ್ಯದ ತೆರಿಗೆ, ಅಧಿಕಾರ ಮಾತ್ರ ಅವರಿಗೆ ಬೇಕಿರುವುದು. ಇಂತಹ ಹೀನ ಮನಸ್ಥಿತಿಯವರನ್ನು ಜನತೆ ಅಧಿಕಾರದಿಂದ ಕಿತ್ತೊಗೆಯಲೇಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.



Join Whatsapp