ಹೊಸದಿಲ್ಲಿ: ಭಾರತದಿಂದ ಈ ಬಾರಿ ಹಜ್ ಯಾತ್ರೆಗೆ ತೆರಳುವ ಮುಸ್ಲಿಂ ಯಾತ್ರಾರ್ಥಿಗಳಿಗೆ ಯಾತ್ರಾ ವೆಚ್ಚ ಪ್ರತಿ ವ್ಯಕ್ತಿಗೆ 50 ಸಾವಿರದಷ್ಟು ಕಡಿತಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ಈ ಹಿಂದೆ ಪಾವತಿಸಲಾಗುತ್ತಿದ್ದ 400 ರೂ ಅರ್ಜಿ ಶುಲ್ಕವನ್ನೂ ರದ್ದುಗೊಳಿಸಲಾಗಿದ್ದು, “ಈ ಬಾರಿ ಹಜ್ ಯಾತ್ರೆಯ ಅರ್ಜಿ ಸಲ್ಲಿಕೆ ಉಚಿತವಾಗಿರುತ್ತದೆ. ಎಲ್ಲ ಹಜ್ ಯಾತ್ರಿಗಳು ಯಾವುದೇ ವೆಚ್ಚ ಮಾಡದೆ ಅರ್ಜಿ ಸಲ್ಲಿಸಬಹುದು. ಹಜ್ ಯಾತ್ರೆಯ ದರವನ್ನು 50 ಸಾವಿರದಷ್ಟು ಕಡಿತಗೊಳಿಸಲಾಗುತ್ತದೆ. ಬ್ಯಾಗ್, ಸೂಟ್ ಕೇಸ್, ಕೊಡೆ ಹಾಗೂ ಚಾಪೆ ಇತ್ಯಾದಿಗಳಿಗೆ ಯಾವುದೇ ಹೆಚ್ಚುವರಿ ಶುಲ್ಕದ ಬೇಡಿಕೆ ಇಡಲಾಗುವುದಿಲ್ಲ. ಆದರೆ, ಹಜ್ ಯಾತ್ರಿಗಳು ಯಾತ್ರೆಯ ಸಂದರ್ಭದಲ್ಲಿ ಮಾಡುವ ಖರೀದಿಯನ್ನು ಸ್ವಂತ ಖರ್ಚಿನಲ್ಲೇ ಭರಿಸಬೇಕು” ಎಂದು ಕೇಂದ್ರ ಅಲ್ಪಸಂಖ್ಯಾತ ಸಚಿವಾಲಯ ಹೇಳಿದೆ.
ಹಜ್ ಯಾತ್ರೆಗೆ ಹಿರಿಯರು, ವಿಶೇಷ ಚೇತನರು ಹಾಗೂ ಮಹಿಳೆಯರಿಗೆ ಯಾತ್ರೆಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ. 45 ವರ್ಷಕ್ಕಿಂತ ಹೆಚ್ಚು ವಯಸ್ಸಾದ ಮಹಿಳೆಯರು ತಾವೇ ಅರ್ಜಿ ಸಲ್ಲಿಸಬಹುದಾಗಿದೆ. ಸುಮಾರು 1.75 ಲಕ್ಷ ಮಂದಿ ಹಜ್ ಯಾತ್ರೆಗೆ ಅರ್ಜಿ ಸಲ್ಲಿಸಬಹುದು ಎಂದು ಅಂದಾಜಿಸಲಾಗಿದೆ.
ಶೇ. 80ರಷ್ಟು ಜನರು ಹಜ್ ಸಮಿತಿ ಮೂಲಕ ಹಾಗೂ ಸುಮಾರು ಶೇ. 20ರಷ್ಟು ಜನರು ಖಾಸಗಿ ಟ್ರಾವೆಲ್ಸ್ ಗಳ ನೆರವಿನಿಂದ ಯಾತ್ರೆ ಕೈಗೊಳ್ಳಲಿದ್ದಾರೆ.
ಯಾತ್ರಿಗಳು ಆರೋಗ್ಯ ತಪಾಸಣೆಯನ್ನು ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಮಾಡಿಸಿರಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಮಾಡಿದ ತಪಾಸಣೆಯನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಸಚಿವಾಲಯ ಅಥವಾ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಬಹುದು. ಪ್ರತಿ ರಾಜ್ಯದಿಂದಲೂ ಒಬ್ಬರು ಹಜ್ ಸಮಿತಿಯಿಂದ ಅಧಿಕಾರಿಯಾಗಿ ಯಾತ್ರೆ ಕೈಗೊಳ್ಳಲಿದ್ದಾರೆ” ಎಂದು ಸರ್ಕಾರ ತಿಳಿಸಿದೆ.