ಪ್ರಹ್ಲಾದ್ ಜೋಷಿ ವಿರುದ್ಧ ಭ್ರಷ್ಟಾಚಾರದ ಆರೋಪ: ಬ್ಯಾಂಕ್ ದಾಖಲೆ ಬಿಡುಗಡೆ ಮಾಡಿದ ಶಾಸಕ ಭೋಜೇಗೌಡ

Prasthutha|

ಬೆಂಗಳೂರು: ಕೇಂದ್ರ ಸರಕಾರದ ಅಧೀನದಲ್ಲಿರುವ ಅಖಿಲ ಭಾರತ ವೈದ್ಯಕೀಯ ಸಂಸ್ಥೆ (ಏಮ್ಸ್) ಯಲ್ಲಿ ಹುದ್ದೆ ಕೊಡಿಸಲು ಹಾಗೂ ರಾಷ್ಟ್ರೀಯ ವೈದ್ಯಕೀಯ ಮಂಡಳಿ (ಎನ್ ಎಂ ಸಿ)ಯ ಸದಸ್ಯತ್ವ ಕೊಡಿಸಲು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಕಚೇರಿ ಲಂಚದ ಹಣ ಪಡೆದಿದೆ ವಿಧಾನ ಪರಿಷತ್ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಭೋಜೇಗೌಡರು ಗಂಭೀರ ಆರೋಪ ಮಾಡಿದರು.

- Advertisement -

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ  ಮಾಧ್ಯಮಗಳ ಜತೆ ಮಾತನಾಡಿದರು.

ಪ್ರಹ್ಲಾದ್ ಜೋಷಿಯವರು ನಮ್ಮ ಪಕ್ಷದ ಬಗ್ಗೆ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ಕುರಿತು ಲಘುವಾಗಿ ಮಾತಾಡಿದ್ದಾರೆ. ಆದರೆ, ತಮ್ಮ ಕಚೇರಿಯಲ್ಲಿ ನಡೆದಿರುವ ಈ ಕಳ್ಳ ವ್ಯವಹಾರದ ಬಗ್ಗೆ ಕೇಂದ್ರ ಸಚಿವರು ಏನು ಹೇಳುತ್ತಾರೆ ಎಂದು ಅವರು ಪ್ರಶ್ನಿಸಿದರು.

- Advertisement -

ಪ್ರಹ್ಲಾದ್ ಜೋಷಿ ಅವರ ಕಚೇರಿಯಲ್ಲಿ ಏನು ನಡೆಯುತ್ತಿದೆ ಎನ್ನುವುದು ರಾಜ್ಯಕ್ಕೆ ಗೊತ್ತಾಗಬೇಕಿದೆ. ತಾವು ಶುದ್ಧರು, ಪರಿಶುದ್ಧರು ಎಂದು ಬೊಬ್ಬಿರಿದು ಹೇಳುವ ಅವರ ಕರ್ಮಕಾಂಡ ಇಲ್ಲಿದೆ ನೋಡಿ ಎಂದು ಹೇಳಿದ ಅವರು, ಪ್ರಹ್ಲಾದ್ ಜೋಷಿ ಅವರ ಕಚೇರಿಯಲ್ಲಿ ಕೇಂದ್ರದ ಸರಕಾರದ  ಹುದ್ದೆಗಳನ್ನು ಕಾಸಿಗಾಗಿ ಬಿಕರಿಗಿಟ್ಟ ಕೆಲ ದಾಖಲೆಗಳನ್ನು ಮಾಧ್ಯಮಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.

ಹಣವನ್ನು ಎರಡು ಬಾರಿ ಬ್ಯಾಂಕ್ ಖಾತೆಗೆ ಹಾಕಿಸಿಕೊಳ್ಳಲಾಗಿದೆ ಎಂದು ಆರೋಪ ಮಾಡಿದ ಭೋಜೇಗೌಡರು, ಅದಕ್ಕೆ ಸಂಬಂಧಿತ ಬ್ಯಾಂಕ್ ಖಾತೆಯ ವಿವರಗಳನ್ನು ಹಾಗೂ ಅಂದಿನ ಕೇಂದ್ರದ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಪ್ರಹ್ಲಾದ್ ಜೋಷಿ ಅವರಿಗೆ ಬರೆದಿದ್ದ ಪತ್ರವೊಂದನ್ನು ಕೂಡ ಬಿಡುಗಡೆ ಮಾಡಿದರು.

ಕೇಂದ್ರದ ಆರೋಗ್ಯ ಸಚಿವರು ಮಾಡಿಕೊಟ್ಟ ಕೆಲಸಕ್ಕೆ ಪ್ರತಿಯಾಗಿ ಅವರ ಸಂಪುಟ ಸಹೋದ್ಯೋಗಿ ಆಗಿದ್ದ  ಪ್ರಹ್ಲಾದ್ ಜೋಷಿ ಅವರ ಕಚೇರಿಗೆ ಹಣ ತಲುಪಿಸಲಾಗಿದೆ.

ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಒತ್ತಾಯ ಮಾಡಿದ ಅವರು, ಈ ಹಣವನ್ನು ಯಾರು ಯಾರಿಗೆ ಕೊಟ್ಟಿದ್ದಾರೆ. ಕಾಸಿಗಾಗಿ ಹುದ್ದೆ ಮಾರಾಟ ಮಾಡಿಕೊಂಡ ಈ ಬಹುಕೋಟಿ ಹಗರಣದ ನಿಜವಾದ ಕಿಂಗ್ ಪಿನ್ ಯಾರು? ಇದರಲ್ಲಿ ಪ್ರಹ್ಲಾದ್ ಜೋಷಿ ಅವರ ಪಾತ್ರ ಏನು ಎಂಬುದು ತನಿಖೆಯಿಂದ ಹೊರಬರಬೇಕಿದೆ ಎಂದು ಹೇಳಿದರು.