ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಎಂ ಧನಂಜಯ ನೆರವು

Prasthutha|

ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಫ್ರೀಡಂ ಪಾರ್ಕ್ ನಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಕೆಪಿಸಿಸಿ ವಕ್ತಾರ ಸಿ.ಎಂ. ಧನಂಜಯ 500 ಹೊದಿಕೆಗಳನ್ನು ನೀಡಿ ಬೆಂಬಲ ಸೂಚಿಸಿದರು.

- Advertisement -

ಅಂಗನವಾಡಿ ಕಾರ್ಯಕರ್ತೆಯರ ಧರಣಿ ನಿರತ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ ನೀಡಲಿದೆ. ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಖುದ್ದಾಗಿ ಇಲ್ಲಿಗೆ ಆಗಮಿಸಿ ನಿಮ್ಮ ಪ್ರತಿಭಟನೆಗೆ ಶಕ್ತಿ ತುಂಬುತ್ತಾರೆ ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಧರಣಿ ನೇತೃತ್ವ ವಹಿಸಿರುವ ವರಲಕ್ಷ್ಮಿ ಅವರು ಡಿ.ಕೆ.ಶಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದರು.

ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಸಿ.ಎಂ. ಧನಂಜಯ, ನಿಮ್ಮ ನ್ಯಾಯಬದ್ಧ ಬೇಡಿಕೆಗಳ ಈಡೇರಿಕೆಗಾಗಿ ಹಲವು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದೀರಿ. ನಿಮಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ಪ್ರೀಡಂಪಾರ್ಕ್ ನಲ್ಲಿ ಯಾವುದೇ ‌ಮೂಲಭೂತ ಸೌಲಭ್ಯಗಳು ಇಲ್ಲದಿದ್ದರೂ ಚಳಿಯನ್ನೂ ಲೆಕ್ಕಿಸದೆ ಎಲ್ಲರೂ ಧರಣಿ ಕೂತಿದ್ದೀರಿ. ನಿಮ್ಮ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿರೋದು ಸರಿಯಲ್ಲ ಎಂದರು.

- Advertisement -

ಕೋರೋನಾ ಸಮಯದಲ್ಲಿ ಜೀವದ ಹಂಗು ತೊರೆದು ಮಂಚೂಣಿ ಕಾರ್ಯಕರ್ತರಾಗಿ ಮುಂಚೂಣಿ ಸೇನಾನಿಗಳಾಗಿ ಜನರ ಜೀವನ ರಕ್ಷಿಸಿದ್ದೀರಿ. ಸಂಕಷ್ಟದ ಸಮಯದಲ್ಲಿ ನೀವು ಮಾಡಿದ ಕೆಲಸವನ್ನು ಗುರುತಿಸಿ ಸರ್ಕಾರ ಇದೇ ಬಜೆಟ್ ನಲ್ಲಿ ನಿಮ್ಮ ಬೇಡಿಕೆ ಈಡೇರಿಸಬೇಕು ಎಂದರು.

 ಇನ್ನು ಕೇವಲ ಎರಡು ತಿಂಗಳಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ. ನಿಮ್ಮ ಎಲ್ಲಾ ಬೇಡಿಕೆ ಪರಿಗಣಿಸುತ್ತೇವೆ ಎಂದು ಸಿ.ಎಂ. ಧನಂಜಯ ಪ್ರತಿಭಟನಾನಿರತರಿಗೆ ನೈತಿಕ ಸ್ಥೈರ್ಯ ತುಂಬಿದರು.



Join Whatsapp